
ಮಡಿಕೇರಿ ಮೇ 12 NEWS DESK : ನಿರ್ಗತಿಕ ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಭೌತಿಕ ಶಿಕ್ಷಣವನ್ನು ನೀಡುತ್ತಾ ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿರುವ ಸಿದ್ದಾಪುರ ಮುಸ್ಲಿಂ ಆರ್ಫನೇಜ್(ಎಸ್‍ಎಂಓ) ಸಂಸ್ಥೆಯ ಸುವರ್ಣ ಮಹೋತ್ಸವದ ಮಹಾ ಸಮ್ಮೇಳನ ಮೇ 13 ಮತ್ತು 14ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಿದ್ದಾಪುರದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಎಸ್‍ಎಂಓ ಕಾರ್ಯಕ್ರಮ ಸಂಯೋಜಕರಾದ ವಿ.ಕೆ.ಬಷೀರ್ ಮಾತನಾಡಿ, ಬಡ ಅನಾಥ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಎಸ್‍ಎಂಓ ಸಂಘಟನೆ 1975 ರಲ್ಲಿ 6 ಮಕ್ಕಳೊಂದಿಗೆ ಆರಂಭಗೊಂಡು, 1979ರಲ್ಲಿ ಅನಾಥಾಲಯಕ್ಕಾಗಿ ಕಟ್ಟಡವನ್ನು ನಿರ್ಮಿಸಲಾಯಿತು. ಈ ಅನಾಥಾಲಯದ ಪ್ರಯೋಜನವನ್ನು ಇಲ್ಲಿಯವರೆಗೆ 1800 ಕ್ಕೂ ಹೆಚ್ಚಿನ ಮಕ್ಕಳು ಪಡೆದುಕೊಂಡಿರುವುದಾಗಿ ತಿಳಿಸಿದರು. ಮೇ 13 ರಂದು ಮಧ್ಯಾಹ್ನ ಮಖಾಂ ಝಿಯಾರತ್ ನಡೆಯಲಿದ್ದು, ಸಂಜೆ 4 ಗಂಟೆಗೆ ಸಮಾರಂಭ ಮತ್ತು ಸಮ್ಮೇಳನವನ್ನು ಎಸ್‍ಕೆಜೆಎಂಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ರಾತ್ರಿ 7 ಗಂಟೆಗೆ ಆಯೋಜಿತ ಸಾರ್ವಜನಿಕ ಸಮ್ಮೇಳನವನ್ನು ಸಿದ್ದಾಪುರ ಮಹಲ್ ಖತೀಬರಾದ ನೌಫಲ್ ಹುದವಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶೈಖುನಾ ಎಂ.ಎಂ.ಅಬ್ದುಲ್ಲಾ ಫೈಝಿ ವಹಿಸಲಿದ್ದು, ತಿರುವನಂತಪುರಂನ ನವಾಸ್ ಮನ್ನಾನಿ ಮುಖ್ಯ ಭಾಷಣ ಮಾಡಲಿದ್ದಾರೆಂದು ಮಾಹಿತಿಯನ್ನಿತ್ತರು. :: ಮಹಿಳಾ ಸಮಾವೇಶ :: ಮೇ14 ರಂದು ಬೆಳಗ್ಗೆ 10 ಗಂಟೆಯಿಂದ ಮಹಿಳಾ ಸಮೇವೇಶ, ಸಂಜೆ 4 ಗಂಟೆಗೆ ಎಸ್‍ಎಂಎಓ ಪೂರ್ವ ವಿದ್ಯಾರ್ಥಿಗಳ ಸಮ್ಮೇಳನ, ರಾತ್ರಿ 7 ಗಂಟೆಗೆ ಸಮಾರೋಪ ಸಮ್ಮೇಳನ ನಡೆಯಲಿದೆ. ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ಎಸ್‍ಎಂಓ ನಡೆದು ಬಂದ ಹಾದಿಯ ಬಗ್ಗೆ ಅಬ್ದುಲ್ ರವೂಫ್ ಹಾಜಿ ಮಾತನಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಞಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅನ್ವರ್ ಮುಹಿಯುದ್ದೀನ್ ಹುದವಿ ಮುಖ್ಯ ಭಾಷಣ ಮಾಡಲಿದ್ದಾರೆಂದು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಸೇರಿದಂತೆ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿದ್ದಾಪುರ ಮುಸ್ಲಿಂ ಜಮಾಅತ್ ಕಾರ್ಯದರ್ಶಿಗಳಾದ ಅಬ್ದುಲ್ ರವೂಫ್ ಹಾಜಿ, ಜಂಶೀರ್, ಉಪ ಕಾರ್ಯದರ್ಶಿ ಕೆ.ಎ.ಅಸ್ಗರ್, ಮದರಸದ ಪ್ರಾಂಶುಪಾಲರಾದ ಆರಿಫ್ ಫೈಝಿ ಉಪಸ್ಥಿತರಿದ್ದರು.








