
ಗೋಣಿಕೊಪ್ಪ NEWS DESK ಮೇ 13 : ಸಿಡಿಲಬ್ಬರಕ್ಕೆ ಲಾರಿ ಮೇಲೆ ಮರ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡು, 7 ಕಾರ್ಮಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ಕಾರ್ಮಿಕ ರಾಘವೇಂದ್ರ ಎಂಬುವವರಿಗೆ ಮರದ ಕೊಂಬೆ ಮತ್ತು ಲಾರಿಯ ಒಡೆದ ಗಾಜು ತಗುಲಿ ಗಾಯಗಳಾಗಿವೆ. ಉಳಿದಂತೆ ರಮೇಶ, ಮಹೇಶ, ವಿಜಿ, ಜಾಹಿರ್, ರಂಗ, ಕರಿಗೌಡ ಹಾಗೂ ಶಂಕರ ಇವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಗೊಬ್ಬರವನ್ನು ನಾಲ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಹಿಂದಿರುಗುತ್ತಿದ್ದಾಗ ನಾಲ್ಕೇರಿ- ಗೋಣಿಕೊಪ್ಪ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








