
ಮಡಿಕೇರಿ ಮೇ 13 NEWS DESK : ಮಾದಾಪುರದ ಕುಂಬೂರಿನಲ್ಲಿ ಕಳೆದ ಹನ್ನೆರಡು ದಿನಗಳಿಂದ ನಡೆಯುತ್ತಿರುವ ಬಡ ನಿವೇಶನ ರಹಿತರ ಹೋರಾಟವನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದೆಂದು ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜೆ.ಶಿವಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಬೂರು ಲಕ್ಕೇರಿಯಲ್ಲಿ ಆರು ನೂರು ಕುಟುಬಗಳು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿವೆ. ಈ ಹಂತದಲ್ಲಿ ಎಐಟಿಯುಸಿ ಸಂಘ0ಟನೆಯ ಹೆಚ್.ಎಂ. ಸೋಮಪ್ಪ ಅವರು, ನಿವೇಶನ ರಹಿತರ ಹೋರಾಟ ಅರ್ಥಹೀನವೆಂದು ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು. ಇಂದಿಗೂ ಬಡ ನಿವೇಶನ ರಹಿತ ಕಟುಂಬಗಳು ತೋಟಗಳ ಲೈನ್ ಮನೆಗಳಲ್ಲಿ ಸಂಕಷ್ಟದ ಬದುಕನ್ನು ನಡೆಸಿಕೊಂಡು ಬರುತ್ತಿವೆ. ಇಂತಹ ಕುಟುಂಬಗಳಿಗೆ ಗುಲಾಮಗಿರಿಯಿಂದ ಮುಕ್ತಿ ಕೊಡಿಸುವಂತೆ ಆಗ್ರಹಿಸಿದ ಶಿವಪ್ಪ ಅವರು, ಪ್ರತಿಭಟನೆಯಲ್ಲಿ ಇತರೆ ಪಂಚಾಯ್ತಿಗಳ ನಿವೇಶನ ರಹಿತರು ಪಾಲ್ಗೊಂಡಿರುವುದನ್ನು ಸೋಮಪ್ಪ ಅವರು ಟೀಕಿಸಿದ್ದಾರೆ. ಆದರೆ, ಪ್ರತಿಭಟನೆಯಲ್ಲಿ ನಿರತರಾಗಿರುವವರು ಹೊರಗಿನ ಪಂಚಾಯ್ತಿಗಳವರಾಗಿದ್ದರು ಅವರು ಇದೇ ದೇಶದವರಲ್ಲವೆ, ಅವರಿಗೆ ನಿವೇಶನವನ್ನು ಕೇಳುವ ಹಕ್ಕಿಲ್ಲವೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಬಹುಜನ ಕಾರ್ಮಿಕರ ಸಂಘ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಟಿಕೊಪ್ಪ ಹೋಬಳಿ ಕಾರ್ಯದರ್ಶಿ ಎ.ಎಂ. ಗೀತಾ ಮಾತನಾಡಿ, ಕಳೆದ ನಾಲ್ಕೈದು ದಶಕಗಳಿಂದ ಪರಿಶಿಷ್ಟರು ಸೇರಿದಂತೆ ಎಲ್ಲಾ ಬಡವರ್ಗದ ಮಂದಿ ಲೈನ್ ಮನೆ ಮತ್ತು ಬಾಡಿಗೆ ಮನೆಗಳಲ್ಲಿ ಸಂಕಷ್ಟದ ಬದುಕು ಸವೆಸುತ್ತಿದ್ದಾರೆ. ತಮ್ಮ ಈ ಸಂಕಷ್ಟದಿಂದ ಹೊರ ಬರುವ ನಿಟ್ಟಿನಲ್ಲಿ ಈ ಮಂದಿ ಹಲವಾರು ಬಾರಿ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿ, ಮನವಿ ಪತ್ರಗಳನ್ನು ಸಂಬಂಧಿಸಿದವರಿಗೆ ನೀಡಿದ್ದರು ಸೂಕ್ತ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಇದೀಗ ಹೋರಾಟಕ್ಕೆ ಇಳಿದಿರುವುದಾಗಿ ತಿಳಿಸಿದರು. ನಮ್ಮ ಹೋರಾಟಕ್ಕೆ ವಿರುದ್ಧವಾಗಿ ಸೋಮಪ್ಪ ಅವರು ನೀಡಿರುವ ಹೇಳಿಕೆಗೆ ಸರ್ಕಾರ ಯಾವುದೇ ಮನ್ನಣೆ ನೀಡಬಾರದೆಂದು ಆಗ್ರಹಿಸಿದ ಅವರು, ಪ್ರಸ್ತುತ ಕುಂಬೂರುವಿನಲ್ಲಿರುವ ಜಾಗದ ಬಗ್ಗೆ ಕಂದಾಯ ಇಲಾಖೆ ಅಗತ್ಯ ತೀರ್ಮಾನ ಕೈಗೊಂಡು ನಿರ್ವಸತಿಗರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಟಿ.ಎ.ಜಾನ್ಸಿ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರಾದ ಹೆಚ್.ಬಿ. ಮುತ್ತಣ್ಣ, ತಾಲ್ಲೂಕು ಕಾರ್ಯದರ್ಶಿ ಬಿ.ಜಾನಕಿ, ಸುಂಟಿಕೊಪ್ಪ ಹೋಬಳಿ ಸಹ ಕಾಯ್ದರ್ಶಿ ಸುಂದರಿ ಉಪಸ್ಥಿತರಿದ್ದರು.









