


ನಾಪೋಕ್ಲು ಮೇ 14 NEWS DESK : ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದ ಅಷ್ಟಬಂಧ ಬ್ರಹ್ಮಕಲಶ ಉತ್ಸವಕ್ಕೆ ವಿಶೇಷ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ 18ರ ವರೆಗೆ ಜರುಗಲಿರುವ ಅಷ್ಟಬಂಧ ಬ್ರಹ್ಮಕಲಶ ಉತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಸಂಜೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ತಕ್ಕ ಮುಖ್ಯಸ್ಥರು ಹಾಗೂ ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರು ದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಧಾರ್ಮಿಕ ಪೂಜಾ ವಿಧಿ ವಿಧಾನ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಧಾರ್ಮಿಕ ಕಾರ್ಯಕ್ರಮಗಳಾದ ಅಂಕುರಾರ್ಪಣೆ, ಪ್ರಾಸಾದ ಸುದ್ದಿ, ವಾಸ್ತು, ರಾಕ್ಷೋಗ್ನ ಹೋಮ, ವಾಸ್ತು ಬಲಿ ನಡೆಯಿತು. ಇದಕ್ಕೂ ಮೊದಲು ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ಅವರನ್ನು ಚಂಡೆ ಮೇಳಗಳೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಹಾಗೂ ಸುಮನ್ ಸುಬ್ರಮಣಿ ಅವರು ಮಾತನಾಡಿ, ಪೂಜಾ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಭಕ್ತ ಜನ ಸಂಘದ ಕಾರ್ಯದರ್ಶಿ ಬಟ್ಟೀರ ಚೊಂದಮ್ಮ ಮೇದಪ್ಪ, ಖಜಾಂಚಿ ಅಂಜಪರವಂಡ ಕುಶಾಲಪ್ಪ, ಮಾಜಿ ಖಜಾಂಚಿ ನಬುಡುಮಂಡ ಸುಬ್ರಮಣಿ, ನಿರ್ದೇಶಕ ಪರದಂಡ ನರೇಂದ್ರ, ಪರದಂಡ ರಮೇಶ್, ಅನ್ನಡಿಯಂಡ ದಿಲೀಪ್ ಕುಮಾರ್, ಮಾಜಿ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಣಿಯರ ನಾಣಯ್ಯ, ಪಾರುಪತ್ತೆಗಾರ ಪರದಂಡ ಪ್ರಿನ್ಸ್., ಉದಿಯಂಡ ಸುಭಾಷ್, ಬಟ್ಟಿರ ಮೇದಪ್ಪ, ಕಾಂಡಂಡ ಉಷಾ ಜೋಯಪ್ಪ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









