

ಮಡಿಕೇರಿ NEWS DESK ಮೇ 15 : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಿರುವ ರಾಜ್ಯ ಸರಕಾರದ ಕ್ರಮ ಖಂಡನೀಯವೆಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಸರಕಾರ ನೀಡಿರುವ ಆದೇಶ ಕಾನೂನಿಗೆ ವಿರುದ್ಧವಾಗಿದೆ. ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. 2022ರಲ್ಲಿದ್ದ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದಿರುವ ಕಾಂಗ್ರೆಸ್ ಸರಕಾರ ಒಂದು ಸಮುದಾಯದ ಓಲೈಕೆಗಾಗಿ ವಿದ್ಯಾರ್ಥಿಗಳ ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೆಲ್ಲರೂ ಸರ್ವ ಸಮಾನರು ಮತ್ತು ಐಕ್ಯತೆಯಿಂದ ಶಿಕ್ಷಣದ ಗುರಿ ಸಾಧಿಸಬೇಕೆನ್ನುವ ಉದ್ದೇಶದಿಂದ ಸಮವಸ್ತ್ರದ ವ್ಯವಸ್ಥೆಯನ್ನು ಪಾಲಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಸರಕಾರ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯುವ ಕಾರಣ ನೀಡಿ ವಿದ್ಯಾರ್ಥಿಗಳ ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳಲ್ಲಿ ಭೇದಭಾವ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಒಂದು ಸಮುದಾಯದ ಮಂದಿ ರಾಜ್ಯ ಸರಕಾರದ ವಿರುದ್ಧ ತಿರುಗಿ ಬಿದ್ದ ಕಾರಣ ಕಾಂಗ್ರೆಸ್ ಹಿಜಾಬ್ ರಾಜಕಾರಣವನ್ನು ಆರಂಭಿಸಿದೆ. ಕಳೆದ 3 ವರ್ಷಗಳಲ್ಲಿ ಹಿಜಾಬ್ ಹಕ್ಕಿನ ಕುರಿತು ಸರಕಾರಕ್ಕಿಲ್ಲದ ಕಾಳಜಿ ಇದೀಗ ದಿಢೀರ್ ಆಗಿ ಉದ್ಭವಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಸರಿ ಶಾಲಿನ ಕುರಿತು ಸಚಿವ ಪ್ರಿಯಾಂಕ ಖರ್ಗೆ ಅವರು ನೀಡಿರುವ ಹೇಳಿಕೆ ಖಂಡನೀಯ. ಕೇಸರಿ ಶಾಲು ಧರಿಸುವುದು ಹಿಂದೂಗಳ ಹಕ್ಕಾಗಿದೆ. ಒಂದು ಸಮುದಾಯದ ಓಲೈಕೆಗಾಗಿ ಹಿಂದೂ ಸಮಾಜದ ಹಕ್ಕಿನ ಮೇಲೆ ಸವಾರಿ ಮಾಡುವುದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲವೆಂದು ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ.








