
ಸೋಮವಾರಪೇಟೆ ಮೇ 19 NEWS DESK : ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಶಾಸಕ ಡಾ.ಮಂತರ್ ಗೌಡ ಅವರು ಹೇಳಿದರು. ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್‍ಗೆ ಸೇರಿದ ಜಾಗದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಂಡು ನಂತರ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರೊಂದಿಗೆ ಕಸವಿಲೇವಾರಿಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ಪಟ್ಟಣದ ಸ್ವಚ್ಚತೆಗೆ ಸಾರ್ವಜನಿಕರು ಕೈಜೋಡಿಸಬೇಕು. ರಸ್ತೆ ಬದಿಯಲ್ಲಿ ಕಸವನ್ನು ಎಸೆದರೆ, ಇಡೀ ಪರಿಸರ ಗಬ್ಬೆದ್ದು ನಾರುತ್ತದೆ. ಸಾಂಕ್ರಾಮಿಕ ರೋಗಗಳು ಹರಡಿ ದೊಡ್ಡ ಮಟ್ಟದ ಸಮಸ್ಯೆಯಾಗುತ್ತದೆ. ಈ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಅವರ ಕಷ್ಟವನ್ನು ನಾವೆಲ್ಲರೂ ಕೇಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಯೂನಿಯನ್ ಬ್ಯಾಂಕ್‍ನವರು ತಮ್ಮ ಜಾಗದ ಸುತ್ತ ಬೇಲಿ ಹಾಕಿಸಿಕೊಂಡು ಭದ್ರಪಡಿಸಿಕೊಳ್ಳಬೇಕು. ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಬ್ಯಾಂಕ್ ಅಧಿಕಾರಿಗೆ ಸೂಚಿಸಿದರು. ರಸ್ತೆ ಬದಿಯಲ್ಲಿ ಕಸ ಸಂಗ್ರಹವಾಗುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರ ಅಳವಡಿಸಿ ನಿರ್ವಹಣೆ ಮಾಡಬೇಕು. ಅನಾಗರಿಕರಂತೆ ರಸ್ತೆ ಬದಿಯಲ್ಲಿ ಕಸ ಎಸೆಯುವವರು ಸಿಕ್ಕಿಬಿದ್ದರೆ, ಕಾನೂನು ಕ್ರಮ ಕೈಗೊಳ್ಳಬೇಕು. ನಿರಂತರ ತಪ್ಪು ಮಾಡಿದರೂ ಶಿಕ್ಷೆ ಆಗದಿದ್ದರೆ ಕಸ ಎಸೆಯುವುದನ್ನು ಬಿಡುವುದಿಲ್ಲ ಎಂದು ಹೇಳಿದ ಶಾಸಕರು, ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಮುಖ್ಯಾಧಿಕಾರಿಗೆ ತಿಳಿಸಿದರು. ಪ್ರತಿದಿನ ಒಣಕಸ ಮತ್ತು ಹಸಿ ಕಸ ಸಂಗ್ರಹಕ್ಕೆ ಪಂಚಾಯಿತಿ ವಾಹನ ತೆರಳಿದ್ದು, ಸಾರ್ವಜನಿಕರು ಕಸವನ್ನು ವಾಹನಕ್ಕೆ ಹಾಕಬೇಕು. ರಸ್ತೆ ಬದಿಯಲ್ಲಿ ಕಸ ಎಸೆಯುವವರು ಸಿಕ್ಕಿ ಬೀಳುತ್ತಾರೆ. ಕಾನೂನು ಕ್ರಮ ಖಂಡಿತ ಎಂದು ಮುಖ್ಯಾಧಿಕಾರಿ ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಪ್ರಮುಖರಾದ ಡಿ.ಯು.ಕಿರಣ್, ಶೀಲಾ ಡಿಸೋಜ, ಎಂ.ಎ.ರುಬಿನಾ, ಮಂಜುಳಾ, ಜನಾರ್ಧನ್, ಮೀನಾ ಕುಮಾರಿ, ಶಾಸಕರ ಆಪ್ತಸಹಾಯಕ ಚೆರಿಯಮನೆ ದಿಗಂತ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಇದ್ದರು.









