
ವಿರಾಜಪೇಟೆ ಮೇ 21 NEWS DESK : ಜಿಲ್ಲಾ ಕೇಂದ್ರಗಳಲ್ಲಿ ಸಿಐಟಿಯು ಸಂಘಟನೆಯನ್ನು ಬಲಪಡಿಸುವ ಹಾಗೂ ಕಾರ್ಮಿಕರ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಕೊಡಗು ಜಿಲ್ಲಾ ಸಿಐಟಿಯು ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಒಂದು ದಿನದ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಧರ್ಮೇಶ್ ಅವರು, ಕಾರ್ಮಿಕರ ಕನಿಷ್ಠ ವೇತನವನ್ನು ರೂ.36,000 ಕ್ಕೆ ಹೆಚ್ಚಿಸಬೇಕು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮೇ 30 ರಂದು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದರು. ದೇಶದ ಆರ್ಥಿಕ ಕುಸಿತ ಹಾಗೂ ಹೆಚ್ಚುತ್ತಿರುವ ಅಸಮಾನತೆ ಕುರಿತು ದಿಕ್ಸೂಚಿ ಭಾಷಣ ಮಾಡಿದ ಧರ್ಮೇಶ್ ಅವರು, ಪ್ರಸ್ತುತ ದೇಶವು ತೀವ್ರ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದಲ್ಲಿ ಉತ್ಪಾದನಾ ವಲಯ ಸಂಪೂರ್ಣವಾಗಿ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದರು. ಕುಟುಂಬದ ವೆಚ್ಚ ನಿರ್ವಹಣೆಗೆ ಇಂದಿನ ಮಾರುಕಟ್ಟೆ ಬೆಲೆಯನ್ವಯ ಕನಿಷ್ಠ ವೇತನ 36,000 ಇರಬೇಕು. ಕೇಂದ್ರ ಸರಕಾರದ 8ನೇ ವೇತನ ಆಯೋಗವೇ ತನ್ನ ನೌಕರರಿಗೆ ಕನಿಷ್ಠ 69,000 ವೇತನ ಶಿಫಾರಸು ಮಾಡಿರುವಾಗ, ಕಾರ್ಮಿಕರಿಗೆ 36,000 ಕೇಳುವುದು ಸಂಪೂರ್ಣ ನ್ಯಾಯಯುತವಾಗಿದೆ ಎಂದು ಧರ್ಮೇಶ್ ತಿಳಿಸಿದರು. ಕನಿಷ್ಠ ವೇತನಕ್ಕೆ ಆಗ್ರಹಿಸಿ ಕೊಡಗು ಜಿಲ್ಲೆಯಾದ್ಯಂತ ಪ್ರತಿ ಸಿಐಟಿಯು ಸದಸ್ಯರು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಬೃಹತ್ ಜನಾಂದೋಲನ ರೂಪಿಸಬೇಕು ಎಂದು ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಿ.ಆರ್. ಭರತ್ ಅವರು ಜಿಲ್ಲೆಯ ಸಂಘಟನಾ ಯೊಜನೆಯನ್ನು ಮಂಡಿಸಿದರು. ವೇದಿಕೆಯಲ್ಲಿ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸುಮಿತ್ರಾ, ಹಮಾಲಿ ಕಾರ್ಮಿಕರ ಮುಖಂಡರಾದ ಶಾಜಿ ರಮೇಶ್, ಮತ್ತು ಕೊಡಗು ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಪ್ಲಾಂಟೇಷನ್ ಕಾರ್ಮಿಕರ ಮುಖಂಡರಾದ ಎನ್.ಡಿ. ಕುಟ್ಟಪ್ಪ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಅಂಗನವಾಡಿ, ಆಶಾ, ತೋಟದ ಕಾರ್ಮಿಕರು, ಹಮಾಲಿ ಕಾರ್ಮಿಕರು, ಕಾರ್ಮಿಕರು ನೌಕರರು, ಕಟ್ಟಡ ಕಾರ್ಮಿಕರು, ಕಾಫಿ ಕ್ಯೂರಿಂಗ್ ವಕ್ರ್ಸ್ ಕಾರ್ಮಿಕರು, ಸರಕಾರಿ ಆಸ್ಪತ್ರೆ ನೌಕರರು, ಗ್ರಾಮಾಂತರ ಪಂಚಾಯತ್ ನೌಕರರು ಹಾಗೂ ವಾಹನ ಚಾಲಕರ ಸಂಘಟನೆಯ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.









