
ಮಡಿಕೇರಿ ಮೇ 22 NEWS DESK : ಪ್ರಸಿದ್ಧ ಪ್ರವಾಸಿತಾಣ ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯಲ್ಲಿ ಮೇ 18ರಂದು ನಡೆದ ದುರ್ಘಟನೆಯಲ್ಲಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆಯ ಕುರಿತು ರಾಜ್ಯ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿರುವ ಘಟನೆ ಹಾಗೂ ಓರ್ವ ಮಹಿಳೆ ಮೃತಪಟ್ಟಿರುವುದು ಸಂಬಂಧಪಟ್ಟ ಅಧಿಕಾರಿಗಳ ನಿಷ್ಕ್ರೀಯತೆ, ವೈಫಲ್ಯತೆಗಳನ್ನು ಸೂಚಿಸುತ್ತದೆ. ಘರ್ಷಣೆಯಲ್ಲಿ ಗಾಯಗೊಂಡ ಮಾರ್ತಾಂಡ ಆನೆಯೂ ಮೃತಪಟ್ಟಿದೆ. ಇದು ಕೂಡ ಅರಣ್ಯ ಇಲಾಖೆ ಅಧಿಕಾರಿಗಳ ನಿಷ್ಕ್ರೀಯತೆ, ವೈಫಲ್ಯತೆಗಳನ್ನು ಸೂಚಿಸುತ್ತದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಸಾರ್ವಜನಿಕರ ಕುಂದುಕೊರತೆ ಪರಿಹಾರಕ್ಕಾಗಿ ಕಲಂ 12(1)ರ ಅಡಿಯಲ್ಲಿ ಲೋಕಾಯುಕ್ತ, ಉಪ ಲೋಕಾಯುಕ್ತರ ಮೇಲೆ ಬಾಧ್ಯತೆಯನ್ನು ವಿಧಿಸುತ್ತದೆ ಮತ್ತು ಕಲಂ2(10)ರ ಅಡಿಯಲ್ಲಿ ಸಾರ್ವಜನಿಕ ಅಧಿಕಾರಿಗಳಿಂದ ಆಗುವ ದುರಾಡಳಿತವನ್ನು ತಡೆ ಹಿಡಿಯಲು ಬಾಧ್ಯತೆಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ(7(2) ಮತ್ತು ಕಲಂ 9(3)(ಎ) ಪ್ರಕಾರ ಅಧಿಕಾರ ಚಲಾಯಿಸಿ ಸ್ವಯಂ ಪ್ರೇರಿತ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಈ ಕ್ರಮವನ್ನು ಸುಮೋಟೋ ಪ್ರಕ್ರಿಯೆಗಳಿಗೆ ನೋಂದಾಯಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಕುಂದುಕೊರತೆ ಪರಿಹಾರ ಉದ್ದೇಶಕ್ಕಾಗಿ ಮತ್ತು ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳ ಕಡೆಯಿಂದ ಯಾವುದೇ ನಿಷ್ಕ್ರೀಯತೆ ಅಥವಾ ದುರಾಡಳಿತವಿದೆಯೇ ಎಂದು ಪರಿಶೀಲಿಸಲು ಸೋಮವಾರಪೇಟೆ ಉಪ ವಲಯದ ಎಸಿಎಫ್ ಗೋಪಾಲ್ ಎ.ಎ ಮತ್ತು ಕುಶಾಲನಗರ ವಲಯ ಅರಣ್ಯ ಆರ್‍ಎಫ್‍ಓ ರಕ್ಷಿತ್ ಅವರನ್ನು ಎದುರುದಾರರು ಎಂದು ಉಲ್ಲೇಖಿಸಿ ನೋಟೀಸ್ ನೀಡಲು ಕೆ.ಎನ್.ಫಣೀಂದ್ರ ಅವರು ನಿರ್ದೇಶನ ನೀಡಿದ್ದಾರೆ. ಮಾತ್ರವಲ್ಲದೇ ನೋಟೀಸ್ ತಲುಪಿದ 4 ವಾರಗಳ ಒಳಗೆ ತಮ್ಮ ಅಭಿಪ್ರಾಯ ಮತ್ತು ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಲು ಎಸಿಎಫ್ ಗೋಪಾಲ್ ಮತ್ತು ಆರ್‍ಎಫ್‍ಓ ರಕ್ಷಿತ್ ಅವರುಗಳಿಗೆ ಸೂಚಿಸಿದ್ದಾರೆ. ಮುಂದಿನ ದಿನಾಂಕದಂದು ತಮ್ಮ ಆಕ್ಷೇಪಣೆ ಹಾಗೂ ವರದಿಯೊಂದಿಗೆ ಖುದ್ದು ಹಾಜರಾಗುವಂತೆ ತಿಳಿಸಿದ್ದಾರೆ. ಈ ಆದೇಶದ ಪ್ರತಿಯನ್ನು ಕೊಡಗು ಜಿಲ್ಲಾಧಿಕಾರಿ, ಪ್ರದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮಾಹಿತಿಗಾಗಿ ಕಳುಹಿಸಿ ಗಮನಿಸಿರುವ ಲೋಪ ದೋಷಗಳು, ಸಮಸೆಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ತಮ್ಮ ವತಿಯಿಂದ ಅಗತ್ಯವಿರುವ ಕ್ರಮವಹಿಸಿ, ಕೈಗೊಂಡ ಕ್ರಮದ ವರದಿಯನ್ನೂ ಸಲ್ಲಿಸುವಂತೆ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ನಿರ್ದೇಶನ ನೀಡಿದ್ದಾರೆ. ಮೇ 18ರಂದು ಮಕ್ನಾ ಆನೆ ಮಾರ್ತಾಂಡನನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ಸಂದರ್ಭ ಮತ್ತೊಂದು ಸಾಕಾನೆ ಕಂಜನ್ ಏಕಾಏಕಿ ದಾಳಿ ಮಾಡಿತ್ತು. ಈ ಸಂದರ್ಭ ಮಾರ್ತಾಂಡ ಬಿದ್ದಿದ್ದು, ಇದರ ಕೆಳ ಭಾಗದಲ್ಲಿ ಸಿಲುಕಿಕೊಂಡಿದ್ದ ಚೆನ್ನೈ ಮೂಲದ ಪಲ್ಲಾವರಂ ನ ನಿವಾಸಿ ಜುನೆಸ್ಸಿ (33) ಮೃತಪಟ್ಟಿದ್ದರು. ಗಾಯಗೊಂಡಿದ್ದ ಮಕ್ನಾ ಆನೆ ಮಾರ್ತಾಂಡ ಮೇ 19 ರಂದು ಸಾವನ್ನಪ್ಪಿತ್ತು.









