
ಮಡಿಕೇರಿ ಮೇ 22 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ 6 ನೇ ವರ್ಷದ ಮಾವು ಮತ್ತು ಹಲಸು ಮೇಳಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಮಾವು ಸವಿಯುವ ಮೂಲಕ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಮಡಿಕೇರಿ ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷರಾದ ಮಲ್ಲಂಡ ಮಧು ದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಚಟ್ರಂಡ ಲೀಲಾ ಮೇದಪ್ಪ, ಕೆ.ಎಂ.ಮನೋಹರ್, ಸುವಿನ್ ಗಣಪತಿ, ಮನು ಮಹೇಶ್, ಪೂವಪ್ಪ ನಾಯ್ಕ, ಉಮೇಶ್ ರಾಜಾ ಅರಸ್, ಸುದೀರ್, ಕಾಂಗೀರ ಸತೀಶ್, ಬಿ.ಎ.ಹರೀಶ್, ನಗರಸಭಾ ಸದಸ್ಯರಾದ ಸತೀಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಶಶಿಧರ, ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಮುತ್ತಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪಣೀಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಷ್ಮ, ಇತರರು ಇದ್ದರು. ಮಾವು ಮೇಳಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ವಿವಿಧ ಮಾವಿನ ಹಣ್ಣು ಮಹತ್ವ ಕುರಿತು ಮಾಹಿತಿ ಪಡೆದ ಶಾಸಕರು ಬಾದಾಮಿ, ಇಮಾಮ್ ಪಸಂದ್, ಆಲ್ಫೊನ್ಸೋ, ಕೇಸರ್, ದಶೇರಿ, ಮಲ್ಲಿಕಾ, ಮಾಲ್ಗೋವಾ, ಸಿಂಧೂರ, ರಸಪುರಿ, ತೋತಪುರಿ, ಕಾಲಾಪಾಡಿ, ಸಕ್ಕರೆಗುತ್ತಿ, ರುಮಾನಿ, ಮಿಠಾಯಿ ಮಾವು, ಉಪ್ಪಿನಕಾಯಿ ಮಾವು ಹೀಗೆ ಹಲವು ರೀತಿಯ ಮಾವುಗಳ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ವಿವಿಧ ರೀತಿಯ ಹಲಸು, ಮಾವು, ಮಂಗೋಸ್ಟಿನ್, ರಾಂಭೂಟಾನ್, ಮತ್ತಿತರ ಹಣ್ಣಿನ ಗಿಡಗಳ ಬಗ್ಗೆಯೂ ಮಾಹಿತಿ ಪಡೆದರು. ಹಣ್ಣು ಮತ್ತು ಹೂವಿನ ಗಿಡಗಳ ಬೀಜಗಳನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ಸುಮಾರು 20 ಮಾವಿನ ಮಳಿಗೆ ಹಾಗೂ ಎರಡು ಹಲಸು ಮಳಿಗೆ ಹಾಗೆಯೇ ವಿವಿಧ ರೀತಿಯ ಹಣ್ಣಿನ, ತರಕಾರಿ ಮತ್ತು ಹೂವಿನ ಗಿಡಗಳ ಬೀಜ ಮಳಿಗೆಗಳು ಮಾವು ಮತ್ತು ಹಲಸು ಮೇಳದಲ್ಲಿ ಆಕರ್ಷಣೀಯವಾಗಿದ್ದವು. ನೈಸರ್ಗಿಕವಾಗಿ ಕೃಷಿಕರೇ ತಮ್ಮ ತೋಟದಲ್ಲಿ ಬೆಳೆದು ಗ್ರಾಹಕರಿಗೆ ಮಾರಾಟ ಮಾಡುವುದು ವಿಶೇಷವೇ ಸರಿ ಎಂದರು. ಹಣ್ಣುಗಳ ರಾಜ ಮಾವು ಎಂದರೆ ಪ್ರತಿಯೊಬ್ಬರ ಬಾಯಲ್ಲೂ ನೀರು ಬರುತ್ತದೆ. ಹಾಗಾಗಿ ಹಿಂದೆ ಚಿಕ್ಕ ಮಕ್ಕಳಿದ್ದ ಸಂದರ್ಭದಲ್ಲಿ ಮಾವಿನ ಹಣ್ಣನ್ನು ಹೆಚ್ಚು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವು ಎಂದು ಶಾಸಕರು ಸ್ಮರಿಸಿದರು. ಕೊಡಗು ಜಿಲ್ಲೆಯಲ್ಲಿ ಬಹು ಬೆಳೆ ಬೆಳೆಯಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು ಹಾಗೆಯೇ ಕಾಡು ಮಾವು, ಇತ್ತೀಚೆಗೆ ಅಡಿಕೆ, ಬಟರ್ ಫ್ರೂಟ್ ಬೆಳೆ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಪರ್ಯಾಯ ಬೆಳೆಯತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು. ಮಾದಾಪುರದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯ 100 ಎಕರೆ ಜಾಗವಿದ್ದು, ಗುತ್ತಿಗೆ ಆಧಾರದಲ್ಲಿ ಕೃಷಿಕರಿಗೆ ಜಮೀನು ನೀಡಿದರೆ ಹೆಚ್ಚಿನ ಆದಾಯ ಬರಲಿದೆ ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. ಮಾವು ಮತ್ತು ಹಲಸು ಬೆಳೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾವು ಬೆಳೆಗಾರರಿಂದ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಡಾ.ಮಂತರ್ ಗೌಡ ಅವರು ತಿಳಿಸಿದರು. ಮಾವಿನ ದರ ಇಂತಿದೆ. ಬಾದಾಮಿ ರೂ.100, ಇಮಾಮಿ ಪಸಂದ್ ರೂ.200, ಆಲ್ಫೊನ್ಸೋ ರೂ.150, ಕೇಸರ್ ರೂ.200, ದಶೇರಿ ರೂ.180, ಮಲ್ಲಿಕಾ ರೂ.100, ಮಾಲ್ಗೋವಾ ರೂ.200, ಸಿಂಧೂರ ರೂ.60, ರಸಪುರಿ ರೂ.100, ತೋತಪುರಿ ರೂ.40, ಕಾಲಾಪಾಡಿ 150, ಸಕ್ಕರೆ ಗುತ್ತಿ 200, ರುಮಾನಿ 100 ದರದಲ್ಲಿ ಮಾವು ದೊರೆಯಲಿದೆ.









