
ಮಡಿಕೇರಿ ಮೇ 23 NEWS DESK : ಆಡಳಿತ ಪಕ್ಷದೊಳಗಿನ ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಉತ್ತಮ ಆಡಳಿತದ ನಿರೀಕ್ಷೆಯಲ್ಲಿ ಬಹುಮತ ನೀಡಿದ ಜನರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎ.ಎಸ್.ಪ್ರಕಾಶ್ ಆಚಾರ್ಯ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಳೆಗಾಲ ಸಮೀಪಿಸಿದರೂ ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮಡಿಕೇರಿ ಶಾಸಕರು 6.50 ಕೋಟಿ ರೂ. ವಿಶೇಷ ಅನುದಾನವನ್ನು ತಂದಿದ್ದು, ಈ ಹಣದಿಂದ ಕಾಮಗಾರಿ ನಡೆಯುತ್ತಿದೆ. ನಗರೋತ್ಥಾನದ ಕಾಮಗಾರಿಗಳು ಕೂಡ ಈಗಿನ ಶಾಸಕರ ಆಸಕ್ತಿಯಿಂದ ನಡೆಯುತ್ತಿದೆ. ಶಾಸಕರು ನಗರದ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಹಿಂದೆ ಇದ್ದ ಶಾಸಕರು ನಗರಸಭೆಗೆ ಯಾವುದೇ ವಿಶೇಷ ಅನುದಾನವನ್ನು ತಂದಿಲ್ಲವೆಂದು ಟೀಕಿಸಿದರು. ಮಳೆಗಾಲ ಸಮೀಪಿಸಿದರೂ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ತಡೆಗೋಡೆ ಮತ್ತು ರಸ್ತೆಗಳ ಕಾಮಗಾರಿ ಆರಂಭಗೊಂಡಿಲ್ಲ. ತೋಡು ಮತ್ತು ಚರಂಡಿಗಳ ಸ್ವಚ್ಛತಾ ಕಾರ್ಯ ನಡೆದಿಲ್ಲ. ಜಲ್ ಜೀವನ್ ಮಿಷನ್ ಯೋಜನೆಯಿಂದ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುತ್ತಿಲ್ಲ. ಬಹುತೇಕ ಎಲ್ಲಾ ರಸ್ತೆಗಳು ಗುಂಡಿಮಯವಾಗಿದೆ. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ಸ್ಟೋನ್ ಹಿಲ್ ಭಾಗದಲ್ಲಿ ಕಸ ಹಾಕುವ ಬದಲು ಸುಬ್ರಮಣ್ಯ ನಗರದ ಮೇಲ್ಭಾಗದಲ್ಲಿ ಸುರಿಯಲಾಗುತ್ತಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಕಳೆದ ನಾಲ್ಕು ವರ್ಷಗಳಿಂದ ನಗರದ ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ. ನಗರಸಭೆಯ ಕಚೇರಿಯಲ್ಲಿ ಫಾರಂ ನಂ.3 ಸೇರಿದಂತೆ ಯಾವುದೇ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ, ಇದರಿಂದ ಸಾರ್ವಜನಿಕರು ಕಷ್ಟ ಅನುಭವಿಸುತ್ತಿದ್ದಾರೆ. ಆಡಳಿತ ನಡೆಸುತ್ತಿರುವವರು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಇದೆ ಎಂದು ಪ್ರಕಾಶ್ ಆಚಾರ್ಯ ಆರೋಪಿಸಿದರು. *ಮೇ 26 ರಂದು ಪ್ರತಿಭಟನೆ* ಕಳೆದ ನಾಲ್ಕು ವರ್ಷಗಳ ಬಿಜೆಪಿ ಆಡಳಿತದ ವೈಫಲ್ಯವನ್ನು ಖಂಡಿಸಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ಮೇ 26 ರಂದು ಬೆಳಿಗ್ಗೆ 11 ಗಂಟೆಗೆ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಮೊದಲು ಕಾಂಗ್ರೆಸ್ ಕಚೇರಿಯಿಂದ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ಸಾಗಲಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿಗರು ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ನಗರಸಭೆಯ ಅಭಿವೃದ್ಧಿ ಶೂನ್ಯ ಆಡಳಿತದಿಂದ ಬೇಸತ್ತಿರುವ ಸಾರ್ವಜನಿಕರು ಕೂಡ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಉಪಾಧ್ಯಕ್ಷರುಗಳಾದ ಸದಾ ಮುದ್ದಪ್ಪ, ಮುನೀರ್ ಮಾಚರ್, ಪ್ರಮುಖರಾದ ಮಿನಾಜ್ó ಪ್ರವೀಣ್ ಹಾಗೂ ಹೆಚ್.ಎಸ್.ಗೋಪಿನಾಥ್ ಉಪಸ್ಥಿತರಿದ್ದರು.








