
ಕುಶಾಲನಗರ ಮೇ 26 NEWS DESK : ಜೂನ್ ತಿಂಗಳ ತಾ.23 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿರುವ ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಸಮ್ಮೇಳನಾಧ್ಯಕ್ಷರಾದ ವಿರಾಜಪೇಟೆ ತಾಲ್ಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅರಮೇರಿ ಮಠದ ಆವರಣದಲ್ಲಿ ಬಿಡುಗಡೆ ಮಾಡಿದರು. ಶರಣ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಸರ್ವಜನರ ಸಮ್ಮೇಳನ ವಾಗಿ ರೂಪುಗೊಳ್ಳಬೇಕಿದೆ. ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಗಮಿಸುತ್ತಿರುವ ಕಾರಣ ಸಮ್ಮೇಳನಕ್ಕೆ ಹೆಚ್ಚು ಭಕ್ತರು ಆಗಮಿಸುವ ಮೂಲಕ ಇಡೀ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಬೇಕಿದೆ. ಈ ನಿಟ್ಟಿನಲ್ಲಿ ಸಮ್ಮೇಳನ ಸಮಿತಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಈ ಸಂದರ್ಭ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಎಲ್ಲಾ ಜನಸಮುದಾಯದ ಸಮ್ಮೇಳನವಾಗಲಿದೆ. ಈ ದಿಸೆಯಲ್ಲಿ ಎಲ್ಲಾ ಸಮುದಾಯ ಸಂಘಟನೆಗಳ ಸಹಭಾಗಿತ್ವ ಕೋರಲಾಗುತ್ತಿದೆ ಎಂದರು. ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ಶಾಂಭಶಿವಯ್ಯ, ಕುಶಾಲನಗರದ ಬಸವೇಶ್ವರ ದೇವಾಲಯದ ಸ್ಥಳ ದಾನಿ ಎಂ.ಬಿ.ಬಸವರಾಜು ಇದ್ದರು.









