
ಮಡಿಕೇರಿ ಮೇ 26 NEWS DESK : ಕುಶಾಲನಗರ ತಾಲೂಕಿನಲ್ಲಿ ನಮ್ಮೂರ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. `ನಮ್ಮೂರ ಶಾಲೆ ನಮ್ಮದು ನಮ್ಮೂರಲ್ಲೆ ಉಳಿಯಲಿ’ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಎಐಡಿಎಸ್‍ಓ ನೇತೃತ್ವದಲ್ಲಿ ಚಿಕ್ಕತ್ತೂರು, ಮದಲಾಪುರ ಶಾಲೆಗಳ ಮುಂದೆ ಬ್ಯಾನರ್ ಕಟ್ಟಿ ಶಾಲೆ ಮುಚ್ಚುವ ಕ್ರಮಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕಿ ಸ್ವಾತಿ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಸರ್ಕಾರಿ ಶಾಲೆ ಉಳಿಸಿ ಎಂದು ಹೋರಾಟ ಮಾಡುವ ದುಸ್ಥಿತಿ ಬಂದಿದೆ. ಕರ್ನಾಟಕ ಯಾವುದೇ ಪಕ್ಷದ ಶಾಸಕರು ಸರ್ಕಾರಿ ಶಾಲೆ ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿಲ್ಲ. ಸದನದಲ್ಲಿ ಒಂದೇ ಒಂದು ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಮಗು ಇರುವ ಶಾಲೆಗಳ ಪಟ್ಟಿಯನ್ನು ಸರ್ಕಾರ ನೀಡಲಿ. ತಾಲೂಕಿನ ಕೆಲ ಗ್ರಾಮಗಳಲ್ಲಿ ಮೋಸದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಗ್ರಾಮಸ್ಥರ ಸಹಿ ಸಂಗ್ರಹಿಸುತ್ತಿದ್ದು, ಇದು ಅತ್ಯಂತ ಖಂಡನೀಯ. ಜನರು ಜಾಗೃತರಾಗಿದ್ದು ಸರ್ಕಾರದ ಈ ಜನವಿರೋಧಿ ನೀತಿ ವಿರುದ್ಧ ಒಗ್ಗಟ್ಟಾಗಿ ತೀವ್ರ ಪ್ರತಿರೋಧ ಒಡ್ಡಬೇಕು ಎಂದು ಕರೆ ನೀಡಿದರು. ಸರ್ಕಾರ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು. ಅದನ್ನು ಬಿಟ್ಟು ಕೆಪಿಎಸ್ ಮ್ಯಾಗ್ನೆಟ್, ಪಿಎಂಶ್ರೀ ಯೋಜನೆಗಳ ಮೂಲಕ ಸರ್ಕಾರಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿವೆ. ಸರ್ಕಾರಗಳ ಈ ನೀತಿಗಳನ್ನು ಬಲಿಷ್ಠ ಜನಾಂದೋಲನದ ಮೂಲಕ ಹಿಮ್ಮೆಟ್ಟಿಸಬೇಕು ಎಂದು ಹೇಳಿದರು. ಸಂಘಟನೆ ಪದಾಧಿಕಾರಿ ಪೂರ್ಣಿಮಾ ಸ್ವಾತಿ, ಹೇಮಾ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸಿಕ್ಕತ್ತೂರು ಗ್ರಾಮದ ಹರೀಶ್, ಮಂಜುನಾಥ್, ಹೃತಿಕ್, ವಿಜಯನಗರದ ಸುರೇಶ್, ಮಂಜುಳಾ, ಮದಲಾಪುರದ ಸಂಗೀತ, ಮಹೇಂದ್ರ, ಶೇಖರ್ ಮುಂತಾದವರು ಭಾಗವಹಿಸಿದ್ದರು.









