

ಮಡಿಕೇರಿ NEWS DESK ಮೇ 28 : ತಾಲ್ಲೂಕು ಮಟ್ಟದಲ್ಲಿ ನಡೆಯುವ ರೂ.50 ಲಕ್ಷಕ್ಕೆ ಒಳಪಟ್ಟ ಕಾಮಗಾರಿಗಳನ್ನು ಆಯಾ ತಾಲ್ಲೂಕಿನ ಗುತ್ತಿಗೆದಾರರೇ ಪಡೆಯಬೇಕು ಎಂದು ಈಗಾಗಲೇ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಸಂಘಗಳಿಗೆ ಮನವಿ ಮಾಡಿದೆ. ಇದರೊಂದಿಗೆ ಹೊರ ಜಿಲ್ಲೆಯ ಗುತ್ತಿಗೆದಾರರ ಮನವೊಲಿಸುವ ಪ್ತಯತ್ನ ಮಾಡಲಾಗುತ್ತದೆ ಎಂದು ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರ ಸಂಕಷ್ಟ್ಟದ ಪರಿಹಾರಕ್ಕೆ ಪೂರಕವಾಗಿ, ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿನ 50 ಲಕ್ಷ ರೂ. ಮೊತ್ತದ ಕಾಮಗಾರಿಯ ಟೆಂಡರನ್ನು ಇತರ ತಾಲ್ಲೂಕು ಮತ್ತು ಜಿಲ್ಲೆಯವರು ಪಡೆಯದಂತೆ ಸಂಘ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಸಂಬoಧಿಸಿದoತೆ, ಹೊರ ಜಿಲ್ಲೆಯ ಗುತ್ತಿಗೆದಾರರು ಶೇ.25 ರಿಂದ 30 ರಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್‌ಗಳನ್ನು ಕರೆಯುತ್ತಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ. ಇಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿರ್ವಹಿಸುವುದು ಅಸಾಧ್ಯ. ಕಡಿಮೆ ಮೊತ್ತ ಕರೆದ ಟೆಂಡರ್ ಕಾಮಗಾರಿಗಳ ಗುಣಮಟ್ಟ ಸಂಪೂರ್ಣ ಹದಗೆಟ್ಟಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಪೂರಕವಾಗಿ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಇಂಜಿನಿಯರ್‌ಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಅಗತ್ಯ ಇಂಜಿನಿಯರ್‌ಗಳ ಕೊರತೆ ಇರುವುದರಿಂದ, ಕಾಮಗಾರಿಗಳ ಗುಣಮಟ್ಟದ ಮೌಲ್ಯಮಾಪನ ಸಮರ್ಪಕವಾಗಿ ನಡೆಯುತ್ತಿಲ್ಲ. ಇದನ್ನೆ ಬಂಡವಾಳವಾಗಿಸಿಕೊoಡ ಹೊರ ಜಿಲ್ಲೆಯ ಗುತ್ತಿಗೆದಾರರು, ಅತ್ಯಂತ ಕಡಿಮೆ ಮೊತ್ತಕ್ಕೆ ಟೆಂಡರ್ ಕರೆದು ಕಳಪೆ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕೆಲವರು ನಕಲಿ ದಾಖಲೆಗಳ ಮೂಲಕ ಗುತ್ತಿಗೆಯನ್ನು ಪಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈಗಾಗಲೆ 4- 5 ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘ ಕಾರ್ಯಪ್ರವೃತ್ತವಾಗಿದೆ ಮತ್ತು ಅವರ ವಿರುದ್ಧ ಪೊಲೀಸರಿಗೆ ದೂರು ನೀಡುವ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆದಿದೆ ಎಂದು ಸ್ಪಷ್ಟಪಡಿಸಿದರು. ಸರಕಾರದ ಅಭಿವೃದ್ಧಿ ಕಾಮಗಾರಿಗಳನ್ನು ಕಡಿಮೆ ಮೊತ್ತಕ್ಕೆ ಟೆಂಡರ್ ಕರೆದು, ಕಳಪೆ ಗುಣಮಟ್ಟದಿಂದ ನಿರ್ವಹಿಸಲಾಗುತ್ತಿದ್ದು, ಇದನ್ನು ಪರಿಶೀಲಿಸಲು ತಾಲ್ಲೂಕು ಮಟ್ಟದಲ್ಲಿ ಸಂಘದಿoದಲೆ “ಸ್ಕ್ವಾಡ್” ರಚಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸ್ಕ್ವಾಡ್ ಗಳ ಮೂಲಕ ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ನಡೆದಿರುವ ಪ್ರಕರಣಗಳ ಬಗ್ಗೆ ಲೋಕಾಯುಕ್ತಕ್ಕೆ ದೂರನ್ನು ನೀಡಲು ಜಿಲ್ಲಾ ಸಂಘ ನಿರ್ಧರಿಸಿದೆ ಲಾರೆನ್ಸ್ ತಿಳಿಸಿದರು. ಜಿಲ್ಲೆಯ ಗುತ್ತಿಗೆದಾರರು ಹಣದ ಮುಗ್ಗಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಾಡಿರುವ ಕೆಲಸದ ಬಿಲ್ ಗಳಿಗೆ ಸಮರ್ಪಕವಾಗಿ ಹಣ ಪಾವತಿಯಾಗಿಲ್ಲ. ಈ ಹಿಂದೆ ಪ್ರಾಕೃತಿಕ ವಿಕೋಪದ ಸಂದರ್ಭ ನಿರ್ವಹಿಸಿದ ಕಾಮಗಾರಿಗಳ ಬಿಲ್ ಹಣವೂ ದೊರಕಿಲ್ಲ. ಇವುಗಳನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎ.ರವಿ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಅರುಣ್ ಕುಮಾರ್ ಹಾಗೂ ಮಡಿಕೇರಿ ತಾಲ್ಲೂಕು ಕಾರ್ಯದರ್ಶಿ ಕೆ.ವಿ.ಕವನ್ ಉಪಸ್ಥಿತರಿದ್ದರು.








