
ಕೂಡಿಗೆ, ಮೇ 1 NEWS DESK : ಕೊಡಗು ಸೇರಿದಂತೆ ಹಾಸನ, ಚಿಕ್ಕಮಗಳೂರು ಜಿಲ್ಲೆಯು ಹಾಸನ ಹಾಲು ಒಕ್ಕೂಟಕ್ಕೆ ಒಳಗೊಂಡಿದ್ದು , ಮೂರು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ದಿನಂಪ್ರತಿ ಬೆಳಿಗ್ಗೆ ಮತ್ತು ಸಂಜೆ ಸೇರಿದಂತೆ ಒಂದು ದಿನಕ್ಕೆ 16.ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಅದರ ಮುಖೇನ ರೈತರ ಅಭಿವೃದ್ಧಿ ಸಹಕಾರ ಮತ್ತು ಸಹಕಾರ ಸಂಘಗಳು ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಒಕ್ಕೂಟವು ಪ್ರಗತಿಯತ್ತ ಸಾಗುತ್ತಿದೆ. ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕಬೇಕಾಗಿದೆ ಎಂದು ಕೊಡಗು ಜಿಲ್ಲೆಯ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಅವರು ಹೇಳಿದರು. ವಿಶ್ವ ಹಾಲು ದಿನಾಚರಣೆ ಅಂಗವಾಗಿ ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತಾನಾಡಿದರು. ಹೆಚ್ಚು ಹಾಲು ಸಂಗ್ರಹದಿಂದ ಹೆಚ್ಚು ಉತ್ಪನ್ನಗಳು ತಯಾರಿಸುವ ಹಿನ್ನೆಲೆಯಲ್ಲಿ ಈಗಾಗಲೇ ಒಕ್ಕೂಟದ ಅಧ್ಯಕ್ಷ ಹೆಚ್.ಡಿ. ರೇವಣ್ಣ ಅವರ ಪ್ರಯತ್ನದಲ್ಲಿ 900. ಕೋಟಿ ವೆಚ್ಚದ ಅಧುನಿಕ ತಂತ್ರಜ್ಞಾನದ ಮೇಗಾ ಡೈರಿಯು ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ. ಇದರ ಮುಖೇನ ರೈತರ ಹಾಲು ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ಧನದೊಂದಿಗೆ ಎಲ್ಲಾ ರೀತಿಯ ಸಹಕಾರವನ್ನು ಒಕ್ಕೂಟದ ವತಿಯಿಂದ ನೀಡಲಾಗುವುದು. ಉದ್ಘಾಟನೆಯ ಕಾರ್ಯಕ್ರಮಕ್ಕೆ ಜಿಲ್ಲೆಯ ರೈತರನ್ನು ಅಧ್ಯಕ್ಷರ ಪರವಾಗಿ ಆಹ್ವಾನದ ಮನವಿ ಮಾಡಿದರು. ಹಾಜರಿದ್ದ ನೂರಾರು ರೈತರಿಗೆ ಒಕ್ಕೂಟದ ಉತ್ಪನ್ನಗಳಾದ ಸಿಹಿ ತಿನಿಸುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೂಡಿಗೆ ಡೈರಿ ವ್ಯವಸ್ಥಾಪಕ ನಂದಿಶ್, ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಮಲ್ಲೇಶ್ ಸಹಾಯಕ ವ್ಯವಸ್ಥಾಪಕ ಸಂತೋಷ್ , ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಸುರೇಶ್, ನಿರ್ದೇಶಕರುಗಳಾದ ಮನುಕುಮಾರ್, ಗಂಗಾಧರ, ವಿಶಕಂಠ,ಕುಮಾರ್ ಸ್ವಾಮಿ, ಸೇರಿದಂತೆ ನೂರಾರು ಹಾಲು ಉತ್ಪಾದಕ ರೈತರು ಹಾಜರಿದ್ದರು.









