
ಮಡಿಕೇರಿ NEWS DESK ಜೂ.2 : ಕೊಡಗು ಜಿಲ್ಲೆಯ ಜನಸ್ನೇಹಿ ಶಾಸಕದ್ವಯರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಅವರು ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಿಂದ ಅವಿರತ ಶ್ರಮ ವಹಿಸುತ್ತಿರುವ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಸಚಿವ ಸ್ಥಾನವನ್ನು ಹೊಂದಲು ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು, ಸರ್ವ ಜನಾಂಗಗಳ ಪ್ರಗತಿಗಾಗಿ ಸ್ಪಂದಿಸಲು ಮತ್ತು ರಾಜ್ಯದ ಜನರ ಸೇವೆ ಮಾಡಲು ಇವರಿಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಬ್ಬರು ಸಜ್ಜನ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ದಕ್ಷ ಆಡಳಿತದಿಂದ ಸರಕಾರದ ಘನತೆ ಮತ್ತಷ್ಟು ಹೆಚ್ಚಲಿದೆ. ಅಲ್ಲದೆ ಎಲ್ಲಾ ಸಮುದಾಯಗಳ ಪ್ರೀತಿ, ವಿಶ್ವಾಸವನ್ನು ಗಳಿಸಿರುವ ಕೊಡಗಿನ ಶಾಸಕದ್ವಯರು ಕರ್ನಾಟಕ ರಾಜ್ಯಕ್ಕೆ ವರವಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜಿಲ್ಲೆಯ ಮೂವರಿಗೆ ಸಚಿವ ಸ್ಥಾನವನ್ನು ನೀಡಿದ್ದರು. ಪ್ರಸ್ತುತ ಕೊಡಗಿನ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಡಿ.ಕೆ.ಶಿವಕುಮಾರ್ ಅವರು ಶಾಸಕದ್ವಯರಿಗೆ ಮಂತ್ರಿ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಕೆ.ಟಿ.ಬೇಬಿ ಮ್ಯಾಥ್ಯು ತಿಳಿಸಿದ್ದಾರೆ.








