
ವಿರಾಜಪೇಟೆ ಜೂ.3 NEWS DESK : ನೂತನ ಸಚಿವ ಸಂಪುಟದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಹಾಗೂ ವಿರಾಜಪೇಟೆ ತಾಲೂಕು ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಆಗ್ರಹಿಸಿದೆ. ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ನ ಜಿಲ್ಲಾ ಉಪಾಧ್ಯಕ್ಷರಾದ ಜೋಕೀಂ ರಾಡ್ರಿಗೀಸ್ ಅವರು, ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ರವರು ಪ್ರಮಾಣ ವಚನ ಸ್ವೀಕರಿಸಿದ್ದು, ಕ್ರೈಸ್ತ ಬಾಂಧವರ ಪರವಾಗಿ ಅವರಿಗೆ ಶುಭಾಶಯಗಳನ್ನು ಕೋರಿದರು. ವಿರಾಜಪೇಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಹಾಗೂ ಅವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಕೊಡಗು ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ. ಇಂದು ಶಾಸಕರು ಸಂಪೂರ್ಣವಾಗಿ ಅನುದಾನವನ್ನು ತಂದು ಅಭಿವೃದ್ಧಿಯ ಹರಿಕಾರರು ಆಗಿದ್ದಾರೆ. ಎಲ್ಲೆಡೆ ರಸ್ತೆಗಳು ಕಾಂಕ್ರಿಟೀಕರಣಗೊಳ್ಳುತಿದ್ದು ಶಾಸಕರ ಕಾರ್ಯವೈಖರಿಗೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು. ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ನ ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಅಗಸ್ಟೀನ್ ಕ್ಷೇವಿಯರ್ ಮಾತನಾಡಿ, ಶಾಸಕ ಪೊನ್ನಣ್ಣ ಅವರು ರಾಜ್ಯದ ಏಕೈಕ ಕೊಡವ ಸಮುದಾಯದ ಶಾಸಕರಾಗಿದ್ದು, ಬಹಳ ವರ್ಷಗಳಿಂದ ಸಚಿವ ಸ್ಥಾನ ಸಿಗುವಲ್ಲಿ ಜಿಲ್ಲೆಗೆ ಪ್ರಾತಿನಿದ್ಯವಿಲ್ಲದಾಗಿದೆ. ಬಿ ಜೆ ಪಿ ಭದ್ರಕೋಟೆಯಾದ ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಶಾಸಕರ ಶ್ರಮ ಅಪಾರವಾಗಿದ್ದು, ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಶಾಸಕರು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಮನವಿ ಮಾಡಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ನ ಜಿಲ್ಲಾ ಸಂಚಾಲಕರಾದ ಜ್ಯೂಡಿವಾಸ್ ಮಾತನಾಡಿ, ಕೊಡಗು ಜಿಲ್ಲೆಯು ತನ್ನದೇಯಾದ ಭೌಗೋಳಿಕ ಪ್ರದೇಶವನ್ನು ಹೊಂದಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ರವರು ಕ್ರೀಡೆ, ಧಾರ್ಮಿಕ ಕಾರ್ಯಗಳಿಗೆ ಮಹತ್ವವನ್ನು ನೀಡಿದ್ದು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ತಲಕಾವೇರಿ, ಭಾಗಮಂಡಲ ಹಾಗೂ ಇನ್ನಿತರ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಘನತೆವೆತ್ತ ಸರ್ಕಾರವು ನೂತನ ಸಚಿವ ಸಂಪುಟದಲ್ಲಿ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ ಮಾತನಾಡಿ ನಮ್ಮ ಶಾಸಕರು ರಸ್ತೆಗಳ ಅಭಿವೃದ್ಧಿ, ಮನೆ ಮನೆಗಳಿಗೂ ನೀರು ತಲುಪಿಸುವ ವ್ಯವಸ್ಥೆ, ಕ್ರೀಡಾ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಮೊತ್ತದ ಅನುದಾನವನ್ನು ನೀಡಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುತ್ತಾರೆ. ಇಂದು ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವ ಡಿ ಕೆ ಶಿವಕುಮಾರ್ ರವರ ಸಂಪುಟದಲ್ಲಿ ಶಾಸಕ ಎ ಎಸ್ ಪೊನ್ನಣ್ಣ ರವರಿಗೆ ಕ್ಯಾಬಿನೆಟ್ ಸಚಿವ ಸ್ಥಾನವನ್ನು ನೀಡುವುದರ ಜೊತೆಗೆ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂದು ನೂತನ ಮುಖ್ಯಮಂತ್ರಿಗಳಲ್ಲಿ ಅವರು ಆಗ್ರಹಿಸಿದರು. ಗೋಷ್ಠಿಯಲ್ಲಿ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ನ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಡ್ಯಾನಿಯಲ್ ಸಲ್ಡಾನಾ ಉಪಸ್ಥಿತರಿದ್ದರು.









