
ಮಡಿಕೇರಿ NEWS DESK ಜೂ.5 : ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಿತಿಮತಿ ಸಮೀಪದ ಕೋಣನಕಟ್ಟೆ ಗ್ರಾಮದ ಕಾಫಿ ತೋಟವೊಂದರಲ್ಲಿ ನಡೆದಿದೆ. ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (51) ಎಂಬುವವರೇ ಮೃತ ದುರ್ದೈವಿ. ಇಂದು ಬೆಳಿಗ್ಗೆ ಕೋಣನಕಟ್ಟೆಯಲ್ಲಿರುವ ಕಾಫಿ ತೋಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡ ಸಂಧ್ಯಾ ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಕರೆ ತರುವ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಕಾಡಾನೆ ದಾಳಿ ಸಂದರ್ಭ ತೋಟದಲ್ಲಿದ್ದ ಕೆಲವು ಕಾರ್ಮಿಕರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಡಾನೆಗಳ ಉಪಟಳ ಮಿತಿ ಮೀರಿರುವ ಕುರಿತು ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








