
ಕುಶಾಲನಗರ ಜೂ.5 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ, ಶಾಲೆಯ ಇಕೋ ಕ್ಲಬ್ ಹಾಗೂ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಎನ್.ಎಸ್.ಎಸ್., ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಜಿಲ್ಲಾ ಸಂಘಟನೆ, ಎಸ್ ಡಿ ಎಂ ಸಿ. ಆಶ್ರಯದಲ್ಲಿ “ನಮ್ಮ ನಡೆ ಹಸಿರೆಡೆಗೆ” ದಡಿ ಶುಕ್ರವಾರ( ಜೂ.5 ರಂದು)ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ’; ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ: 2026 ಕಾರ್ಯಕ್ರಮ
ಏರ್ಪಡಿಸಲಾಗಿತ್ತು. ಪರಿಸರ ಕಾರ್ಯಕ್ರಮದಲ್ಲಿ ಶಾಲಾವರಣದಲ್ಲಿ ಅರಣ್ಯ ಗಿಡ ನೆಟ್ಟು ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಪ್ರತಿಯೊಬ್ಬರೂ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ತೊಡಗಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪರಿಸರಕ್ಕೆ ಧಕ್ಕೆ : ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ಜಾಗತೀಕರಣ, ನಗರೀಕರಣ, ಕೈಗಾರೀಕರಣ ಹಾಗೂ ಮುಂತಾದ ಹತ್ತು ಹಲವು ಅಭಿವೃದ್ಧಿ ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗುತ್ತಿದೆ.ಈ ದಿಸೆಯಲ್ಲಿ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರೆ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದರು. ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರೂ ಆದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ನಾವು ಸ್ವಚ್ಛ, ಹಸಿರು, ಸುಂದರ ಮತ್ತು ಆರೋಗ್ಯವಂತ ಹಾಗೂ ಸುಸ್ಥಿರ ಮತ್ತು ಭವಿಷ್ಯದ ದೃಷ್ಠಿಯಿಂದ ಸುಸ್ಥಿರ ಪರಿಸರ ನಿರ್ಮಾಣಕ್ಕಾಗಿ ಸಂಘಟಿತ ಪ್ರಯತ್ನಪಡಬೇಕು ಎಂದರು. ನೈಸರ್ಗಿಕ ಸಂರಕ್ಷಣೆಗೆ ಒತ್ತು ಅಗತ್ಯ : ನಾವು ನಮ್ಮ ಆಸ್ತಿ- ಪಾಸ್ತಿ, ವೈಯಕ್ತಿಕ ಸ್ವಚ್ಛತೆ ಮತ್ತು ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಹಾಗೂ ನಮ್ಮ ಮನೆಯ ಬಗ್ಗೆ ಕಾಳಜಿ ವಹಿಸಿದಂತೆಯೇ ನಮ್ಮನ್ನು ರಕ್ಷಿಸುತ್ತಿರುವ ಭೂಮಿಯ ಸಂರಕ್ಷಣೆ ಹಾಗೂ
ನೈಸರ್ಗಿಕ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕಿದೆ ಎಂದರು. ಅರಣ್ಯ, ಪರಿಸರ, ವನ್ಯಜೀವಿಗಳು, ಜೀವಿ ವೈವಿಧ್ಯ ಸಂರಕ್ಷಣೆ ಮತ್ತು ಜಲ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಲು ನಾವೆಲ್ಲಾ ಬದ್ಧರಾಗಬೇಕಿದೆ ಎಂದು ಪ್ರೇಮಕುಮಾರ್ ಹೇಳಿದರು. ಪರಿಸರ ಪ್ರತಿಜ್ಞಾ ವಿಧಿ ಬೋಧನೆ: ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್ ಮಾತನಾಡಿ, ನಾವು ನೆಲ- ಜಲ, ಅರಣ್ಯ, ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಪರಿಸರ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಪರಿಸರ ಕಾಳಜಿ ಬೆಳೆಸಿಕೊಂಡು ಭವಿಷ್ಯದ ಪರಿಸರ ರಾಯಭಾರಿಗಳಾಗಿ ರೂಪುಗೊಳ್ಳಬೇಕು ಎಂದರು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಶಾಲೆಯ ಹಿರಿಯ ಶಿಕ್ಷಕ ಕೆ.ಗೋಪಾಲಕೃಷ್ಣ ಮಾಹಿತಿ ನೀಡಿದರು. ಶಿಕ್ಷಕಿಯರಾದ ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ, ವಿದ್ಯಾರ್ಥಿಗಳು ಇದ್ದರು. ನಂತರ ವಿದ್ಯಾರ್ಥಿಗಳು ಪರಿಸರ ಘೋಷಣೆಗಳ ಫಲಕಗಳನ್ನು ಹಿಡಿದು ಗ್ರಾಮದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.








