
ಮಡಿಕೇರಿ ಜೂ.11 NEWS DESK : ದೇಶಭಕ್ತಿ, ಸಮಗ್ರತೆಯ ಪರಿಕಲ್ಪನೆ, ನಾಯಕತ್ವದ ಗುಣಗಳೊಂದಿಗೆ, ರಾಷ್ಟ್ರೀಯ ಸೇವೆಯ ಮೌಲ್ಯಗಳನ್ನು ಯುವ ಸಮೂಹದಲ್ಲಿ ಮೂಡಿಸುವ ಮೂಲಕ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ಸೈನಿಕ ಶಾಲೆಗಳು ಮಹತ್ವದ ಪಾತ್ರ ವಹಿಸಿರುವುದಾಗಿ ಕೇರಳ ಮತ್ತು ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತಿಳಿಸಿದರು. ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ ಆಯೋಜಿತ ಪ್ರತಿಷ್ಠಿತ “ಪ್ರಿ ಸುಬ್ರೋಟೋ ಕಪ್-2026” ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ರಾಜ್ಯಪಾಲರು ಮಾತನಾಡಿದರು. ರಾಷ್ಟ್ರದ ವಿವಿಧೆsಡೆಗಳ ಸೈನಿಕ ಶಾಲೆಗಳ ಯುವ ಫುಟ್ಬಾಲ್ ಆಟಗಾರರು ಪಂದ್ಯಾವಳಿಯಲ್ಲಿ ಶಿಸ್ತಿನಿಂದ ಪಾಲ್ಗೊಂಡು ಪ್ರದರ್ಶಿಸಿರುವ ಕ್ರೀಡಾ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಕೊಡಗು ಸೈನಿಕ ಶಾಲೆಯನ್ನು ಶ್ಲಾಘಿಸಿದರು. ಸೈನಿಕ ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಮಗ್ರ ಶಿಕ್ಷಣ, ಆಯೋಜಿಸುತ್ತಿರುವ ಕ್ರೀಡಾ ಚಟುವಟಿಕೆಗಳು ಹಾಗೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಯುವ ಸಮೂಹದಲ್ಲಿ ಮೂಡಿಸುವ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಯದುವೀರ್ ಒಡೆಯರ್, ವೃತ್ತಿಪರತೆ ಮತ್ತು ಶ್ರೇಷ್ಠತೆಯೊಂದಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಸೈನಿಕ ಶಾಲೆ ಕೊಡಗನ್ನು ಅಭಿನಂದಿಸಿದರು. ಸೈನಿಕ ಶಾಲೆ ಕೊಡಗಿನಂತಹ ಸಂಸ್ಥೆಗಳು ರಾಷ್ಟ್ರೀಯ ಸೇವೆ ಮತ್ತು ನಾಯಕತ್ವಕ್ಕೆ ಬದ್ಧವಾಗಿರುವ ಶಿಸ್ತುಬದ್ಧ, ಸಮರ್ಥ ಮತ್ತು ದೇಶಭಕ್ತ ಯುವಕರನ್ನು ಪೆÇೀಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಿಸಿದರು. :: ವಿಜೇತರು :: ಮುಖ್ಯ ಅತಿಥಿಗಳು ವಿಜೇತ ತಂಡಗಳು ಹಾಗೂ ಆಟಗಾರರಿಗೆ ಪಾರಿತೋಷಕ , ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು. ಅಂಡರ್-15 ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಚಂದ್ರಪುರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೈನಿಕ ಶಾಲೆ ಇಂಫಾಲ್ ರನ್ನರ್‍ಅಪ್ ಸ್ಥಾನ ಪಡೆದುಕೊಂಡಿತು. ಅಂಡರ್-17 ಬಾಲಕಿಯರ ವಿಭಾಗದಲ್ಲಿ ಸೈನಿಕ ಶಾಲೆ ಸುಜಾನ್ಪುರ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೈನಿಕ ಶಾಲೆ ಚಂದ್ರಪುರ ರನ್ನರ್‍ಅಪ್ ಸ್ಥಾನ ಗಳಿಸಿತು. ಅಂಡರ್-17 ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಇಂಫಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆತಿಥೇಯ ಸೈನಿಕ ಶಾಲೆ ಕೊಡಗು ರನ್ನರ್-ಅಪ್ ಸ್ಥಾನ ಪಡೆಯಿತು.ಅತ್ಯುತ್ತಮ ಆಟಗಾರ, ಅತ್ಯುತ್ತಮ ಗೋಲ್‍ಕೀಪರ್ ಹಾಗೂ ಗರಿಷ್ಠ ಗೋಲು ಗಳಿಸಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು. :: ಯುದ್ಧ ಸ್ಮಾರಕಕ್ಕೆ ನಮನ :: ಸಮಾರಂಭಕ್ಕೆ ಆಗಮಿಸಿದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಸಂಸದ ಯದುವೀರ್ ಒಡೆಯರ್ ಅವರನ್ನು ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಸಾಂಪ್ರದಾಯಿಕ ಅಶ್ವದಳದ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಮುಖ್ಯ ಅತಿಥಿಗಳು ಹಾಗೂ ಗೌರವ ಅತಿಥಿಗಳು ಶಾಲೆಯಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ವೀರ ಯೋಧರಿಗೆ ಗೌರವ ಸಮರ್ಪಿಸಿದರು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಮಾತನಾಡಿ, ಶಾಲೆಯ ಇತಿಹಾಸದಲ್ಲಿಯೇ ಒಂದು ಸ್ಮರಣೀಯ ಹಾಗೂ ಐತಿಹಾಸಿಕ ಕ್ಷಣವೆಂದು ಬಣ್ಣಿಸಿದರು. ಈ ಸಂದರ್ಭ ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳ ಶಿಸ್ತಿನ ಪಥಸಂಚಲನ ನಡೆಯಿತು. ರಾಜ್ಯಪಾಲರು ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೊಳ್ಳು ಕುಣಿತ ಕರ್ನಾಟಕದ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಅನಾವರಣಗೊಳಿಸಿತು. :: ಶಾಲಾ ಜಿಮ್ ಉದ್ಘಾಟನೆ :: ಕಾರ್ಯಕ್ರಮ ಫ್ಲ್ಯಾಗ್ ರಿಟ್ರೀಟ್ ಮಾರ್ಚ್ ಮೂಲಕ ಸಮಾರೋಪಗೊಂಡಿತು. ಇದೇ ಸಂದರ್ಭ ರಾಜ್ಯಪಾಲರು ಶಾಲಾ ಸಭಾಂಗಣದಲ್ಲಿ ನವೀಕರಿಸಲಾದ ಶಾಲಾ ಜಿಮ್‍ನ್ನು ಉದ್ಘಾಟಿಸಿದರು. ಶಾಲೆಯ ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರೆ, ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿರವರು ಮುಖ್ಯ ಅತಿಥಿಗಳ ಪರಿಚಯಮಾಡಿದರು. ಕರ್ನಲ್ ಅಮರ್ ಜೀತ್ ಸಿಂಗ್ ಆತ್ಮೀಯವಾಗಿ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಅವರು ವಂದಿಸಿದರು.









