
ಮಡಿಕೇರಿ NEWS DESK ಜೂ.13 : ಅಹಂ ಮತ್ತು ತಾನೇ ಶ್ರೇಷ್ಠ ಎಂಬ ಮನೋಭಾವದಿಂದ ಹೊರ ಬಂದಾಗ ಮಾತ್ರವೇ ಸುಖ ಸಂಸಾರ ನಡೆಸಲು ಸಾಧ್ಯ. ಇದನ್ನು ಗೌಡ ಸಮುದಾಯದ ಇಂದಿನ ಯುವ ಪೀಳಿಗೆ ಮನಗಾಣಬೇಕು, ಪೋಷಕರು ಕೂಡ ಈ ಕುರಿತು ಮಕ್ಕಳಿಗೆ ತಿಳಿ ಹೇಳಬೇಕು ಎಂದು ಮೈಸೂರು ಗೌಡ ಸಮಾಜದ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಂಶುಪಾಲ ಕೊಂಬಾರನ ಬಸಪ್ಪ ಕರೆ ನೀಡಿದ್ದಾರೆ. ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ 10 ಕುಟುಂಬ 18 ಗೋತ್ರದ ಗೌಡ ಸಮುದಾಯದ ವಧು ವರರ ಸಮಾವೇಶ ನಡೆಯಿತು.
ಸಮಾವೇಶವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು ದಾಂಪತ್ಯ ಎಂಬುವುದು ಪತಿ-ಪತ್ನಿ ನಡುವಿನ ಹೊಂದಾಣಿಕೆಯಾಗಿದೆ. ಹಿಂದಿನ ಕಾಲಘಟ್ಟದಲ್ಲಿ ಪೋಷಕರು ಗುರುತಿಸಿದ ವಧು ವರನ ನಡುವೆ ವಿವಾಹಗಳು ನಡೆಯುತ್ತಿತ್ತು. ಇಂತಹ ಮದುವೆಗಳಿಂದ ದಾಂಪತ್ಯ ಜೀವನವೂ ಸುಖಕರವಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸಮಾಜಿಕ ಜಾಲತಾಣಗಳ ಪ್ರಭಾವ ಯುವ ಸಮುದಾಯದ ಮೇಲೆ ಗಾಢ ಪರಿಣಾಮ ಬೀರಿದ್ದು, ಸಂಸಾರದಲ್ಲಿ ಹೊಂದಾಣಿಕೆಯ ಕೊರತೆ ಎದುರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಂಸಾರ, ದಾಂಪತ್ಯ ಜೀವನದ ಬಗ್ಗೆ ಪೋಷಕರು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರ, ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.
ಕೊಡಗು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಿವೃತ್ತ ಪೌರಾಯುಕ್ತೆ ಮೂಟೇರ ಪುಷ್ಪಾವತಿ ಅವರು ಮಾತನಾಡಿ, ಇಂದು ಮಹಾ ನಗರಗಳಲ್ಲಿ ಕೆಲಸದಲ್ಲಿರುವ ವಧು-ವರನ ಹುಡುಕಿ ಮದುವೆ ಸಂಬoಧ ಬೆಸೆಯುವ ಮನಸ್ಥಿತಿ ಕಂಡು ಬರುತ್ತಿರುವುದು ದೊಡ್ಡ ದುರಂತವಾಗಿದೆ. ಹುಟ್ಟಿದ ಊರಲ್ಲಿ ಕೃಷಿ, ತೋಟಗಳನ್ನು ಮಾಡುತ್ತಿರುವ ಯುವ ಸಮುದಾಯಕ್ಕೆ ಹೆಣ್ಣು ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಂಕಿ ಅಂಶಗಳಲ್ಲಿ ಸ್ತ್ರೀ ಲಿಂಗ ಅನುಪಾತವೂ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ. ಇಂದು ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರ ಲಾಭದಾಯಕ ಆಗಿದ್ದು ನಗರ ಪ್ರದೇಶದ ಆದಾಯಕ್ಕಿಂತಲೂ ಅಧಿಕ ಲಾಭ ಮತ್ತು ಸುಸ್ಥಿರ ಬದುಕು ಗ್ರಾಮೀಣ ಭಾಗಗಳಲ್ಲಿದೆ. ಕೃಷಿ ಗೌಡ ಸಮುದಾಯದ ಪರಂಪರೆಯಾಗಿದ್ದು, ಮದುವೆ ಎನ್ನುವುದು ಭವಿಷ್ಯ ಮತ್ತು ಸಮುದಾಯದ ಬೆಳವಣಿಗೆಯ ಸಂಕೇತವಾಗಿದೆ ಎಂಬುವುದನ್ನು ಯಾರೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು. ಕೊಡಗು ಗೌಡ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ನಿವೃತ್ತ ಎಸ್.ಪಿ. ಚೊಕ್ಕಾಡಿರ ಅಪ್ಪಯ್ಯ ಅವರು ಮಾತನಾಡಿ, 2002ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಿರಂತರವಾಗಿ ಗೌಡ ಸಮುದಾಯದ ವಧುವರರ ಸಮಾವೇಶ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಸಮಾವೇಶದಲ್ಲಿ ನೋಂದಣಿ ಸಂಖ್ಯೆ ಏರಿಕೆ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಧು-ವರರ ಸಮಾವೇಶದಲ್ಲಿ ಯುವಕ ಯುವತಿಯರೂ ಪಾಲ್ಗೊಳ್ಳಬೇಕು. ಇದರಿಂದ ಪರಸ್ಪರ ಪರಿಚಯವಾಗಿ ವಿವಾಹ ಸಂಬoಧಗಳು ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಮಾಜ ಬದಲಾಗುತ್ತಿದ್ದು, ವರದಕ್ಷಿಣೆ ಪಿಡುಗು ಕೂಡ ದೂರವಾಗಬೇಕು. ಇಂತಹ ಸಮಾವೇಶಗಳನ್ನು ಸಮುದಾಯದ ಬಂಧುಗಳು ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೊಂಬಾರನ ಬಸಪ್ಪ ಹಾಗೂ ನಿವೃತ್ತ ಪೌರಾಯುಕ್ತೆ ಮೂಟೇರ ಪುಷ್ಪಾವತಿ ಅವರನ್ನು ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಶೆಟ್ಟಿಜನ ಗಣಪತಿ, ಕಾರ್ಯದರ್ಶಿ ಕುಂಜಿಲನ ರತ್ನ ಕುಮಾರಿ, ಖಜಾಂಚಿ ಕುಯ್ಯಮುಡಿ ಅಶ್ವಿನ್ ಕುಮಾರ್, ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಯ್ಯಣ್ಣ, ನಿರ್ದೇಶಕರಾದ ಪುದಿಯನೆರವನ ರೇವತಿ ರಮೇಶ್, ಸೂದನ ರತ್ನಾವತಿ, ಕರ್ಣಯ್ಯನ ಬಸಪ್ಪ, ಕೆದಂಬಾಡಿ ಮುಕುಂದ, ತಳೂರು ಕಾಳಪ್ಪ, ಸೂರ್ತಲೆ ರಾಮಚಂದ್ರ, ಪೂಜಾರಿರ ಜಗದೀಶ್, ಕೊಡಗು ಗೌಡ ಸಮಾಜ ಅಧ್ಯಕ್ಷ ದಂಬೆಕೋಡಿ ಆನಂದ, ಕೊಡಗು ಗೌಡ ವಿದ್ಯಾ ಸಂಘದ ಅಂಬೇಕಲ್ ನವೀನ್, ಬೆಂಗಳೂರು ಕೊಡಗು ಗೌಡ ಸಮಾಜ ಅಧ್ಯಕ್ಷ ಅಯ್ಯೇಟಿ ಮೋಹನ್ ಕುಮಾರ್, ಪ್ರಮುಖರಾದ ಕೋರನ ವಿಶ್ವನಾಥ್, ಕುದುಪಜೆ ಬೋಜಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.








