
ಮಡಿಕೇರಿ NEWS DESK ಜೂ.15 : ಕೊಡಗು ಜಿಲ್ಲೆಯ ಬಹುತೇಕ ರಸ್ತೆಗಳು ಹೊಂಡಗುoಡಿಗಳಿoದ ಕೂಡಿದ್ದು, ಸುಗಮ ಸಂಚಾರ ಅಸಾಧ್ಯವಾಗಿದೆ. ರಸ್ತೆಗಳ ಅವ್ಯವಸ್ಥೆಗೆ ಇಬ್ಬರು ಶಾಸಕರುಗಳ ನಿರ್ಲಕ್ಷ್ಯವೇ ಕಾರಣವೆಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಕಾದು ಜನ ಬೇಸತ್ತು ಹೋಗಿದ್ದಾರೆ. ಕನಿಷ್ಠ ರಸ್ತೆಗಳ ದುರಸ್ತಿ ಕಾರ್ಯವನ್ನು ಕೂಡ ಮಾಡಲಾಗದ ಪರಿಸ್ಥಿತಿಯಲ್ಲಿ ಶಾಸಕರುಗಳು ಇದ್ದಾರೆ. ಆರಂಭದ ಶೂರತನವೆಂಬoತೆ ಆರಂಭದಲ್ಲಿ ಡಾಂಬರೀಕರಣಗೊಳಿಸಿದ ರಸ್ತೆಗಳು ಕಳೆದ ಒಂದು ವಾರದ ಮಳೆಗೆ ನೀರುಪಾಲಾಗಿದ್ದು, ಹೊಂಡಗುoಡಿಗಳು ಮತ್ತೆ ಅಪಾಯವನ್ನು ಆಹ್ವಾನಿಸುತ್ತಿವೆ ಎಂದು ಟೀಕಿಸಿದ್ದಾರೆ. ರಸ್ತೆಗಳ ಅಭಿವೃದ್ಧಿಗಾಗಿ ಕೋಟಿ ಕೋಟಿ ಅನುದಾನ ಬಂದಿದೆ ಎಂದು ಪ್ರಚಾರವನ್ನಷ್ಟೇ ಮಾಡಲಾಗುತ್ತಿದೆ. ಜನರ ಕಣ್ಣೊರೆಸುವ ಉದ್ದೇಶದಿಂದ ರಸ್ತೆ ಕಾಮಗಾರಿಗೆ ವಿವಿಧೆಡೆ ಭೂಮಿಪೂಜೆ ನೆರವೇರಿಸಲಾಗಿದೆ. ಆದರೆ ಇಲ್ಲಿಯವರೆಗೆ ಎಲ್ಲೂ ಕಾಮಗಾರಿ ಆರಂಭಗೊoಡಿಲ್ಲ, ಆರಂಭಗೊoಡಿರುವ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲ ಸಮೀಪಿಸುವ ಹಂತದಲ್ಲಿ ಕಾಮಗಾರಿ ಆರಂಭಿಸುವ ನಾಟಕ ಮಾಡಲಾಗಿದೆ. ಮಳೆಯ ಕಾರಣ ನೀಡಿ ಕಾಮಗಾರಿ ನಡೆಸದೆ ನಿರಾಸಕ್ತಿ ತೋರಲಾಗುತ್ತಿದೆ. ಇನ್ನುಳಿದಿರುವ ಕೇವಲ ಎರಡು ವರ್ಷಗಳನ್ನು ಸಾಮಾಜಿಕ ಜಾಲತಾಣದ ಪ್ರಚಾರದಲ್ಲೇ ಕಳೆದು ಬಿಡುವ ಮನೋಸ್ಥಿತಿಯಲ್ಲಿ ಶಾಸಕರುಗಳು ಇದ್ದಂತಿದೆ. ಸಾರ್ವಜನಿಕರು ರಸ್ತೆಗಳ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಶಾಸಕರುಗಳ ಗಮನ ಸೆಳೆಯುತ್ತಿದ್ದರೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಪ್ರವಾಸಿಗರ ನೆಚ್ಚಿನ ಜಿಲ್ಲೆ ಎಂದು ವಿಶ್ವ ವಿಖ್ಯಾತ ಗಳಿಸಿರುವ ಕೊಡಗು ಇಂದು ಹೊಂಡಗುoಡಿಗಳ ರಸ್ತೆಯಿಂದ ಅಪಖ್ಯಾತಿಗೆ ಒಳಗಾಗುತ್ತಿದೆ ಮತ್ತು ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ. ಆದರೆ ಶಾಸಕರುಗಳು ಮಾತ್ರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಾ ಕಾಲಹರಣ ಮಾಡುತ್ತಿರುವುದು ಕಂಡು ಬಂದಿದೆ ಎಂದು ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಬಿಸಿಲಿನ ವಾತಾವರಣವಿದೆ. ಆದ್ದರಿಂದ ಆರಂಭಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಅಪಾಯವನ್ನು ಆಹ್ವಾನಿಸುತ್ತಿರುವ ಹೊಂಡಗುAಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಶಾಸಕರುಗಳು ಜನರ ಬಳಿಗೆ ತೆರಳಿ ರಸ್ತೆ ಸಮಸ್ಯೆಯನ್ನು ಖುದ್ದು ಪರಿಶೀಲಿಸಿ ಸುಗಮ ಸಂಚಾರಕ್ಕೆ ಯೋಗ್ಯ ರಸ್ತೆಗಳನ್ನು ನೀಡಲು ಯೋಜನೆ ರೂಪಿಸಬೇಕು. ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಹಾಗೂ ಸಂಬoಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.








