
ಮಡಿಕೇರಿ ಜೂ.15 NEWS DESK : ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯು ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರದಂತೆ ಕಂಡು ಬಂದಿದ್ದು, ಜನಸಾಮಾನ್ಯರು ಜಾಗೃತರಾಗಬೇಕೆಂದು ಪ್ರಗತಿಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ಕರೆ ನೀಡಿದೆ. ಒಕ್ಕೂಟದ ವತಿಯಿಂದ ಜೂ.20 ರಂದು “ಎಸ್‍ಐಆರ್ ವಿರೋಧಿ ಸಮಾವೇಶ” ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯಲಿದೆ. ಇದಕ್ಕೆ ಪೂರಕವಾಗಿ ರಾಜ್ಯದ ವಿವಿಧೆಡೆ ಆಯೋಜಿಸಲಾಗಿರುವ “ಎದ್ದೇಳು ಕರ್ನಾಟಕ” ಆಂದೋಲನದ ಭಾಗವಾಗಿ ಜನಜಾಗೃತಿ ಅಭಿಯಾನ ಮಡಿಕೇರಿಗೆ ಆಗಮಿಸಿತು. ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಆದರೆ ಈ ಹಕ್ಕನ್ನು ಪರಿಶಿಷ್ಟರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳಿಂದ ಕಸಿದುಕೊಳ್ಳುವ ಪ್ರಯತ್ನವಾಗಿ ಎಸ್‍ಐಆರ್ ಜಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಚುನಾವಣೆಗೂ ಪೂರ್ವದಲ್ಲೆ ಬಿಹಾರದಲ್ಲಿ ಎಸ್‍ಐಆರ್ ಜಾರಿ ಮಾಡುವ ಮೂಲಕ ಸುಮಾರು 65 ಲಕ್ಷ ಮಂದಿಯ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಆದರೆ, ಮತದಾನ ವಂಚಿತರು ಬಾಂಗ್ಲಾ, ಪಾಕಿಸ್ತಾನದ ನುಸುಳುಕೋರರೆಂದು ಸಾಬೀತು ಪಡಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗಿಲ್ಲ. ಅಲ್ಲಿ ಅಧಿಕೃತವಾಗಿ ಕೇವಲ ಇಬ್ಬರು ಬಾಂಗ್ಲಾದೇಶಿಗರನ್ನಷ್ಟೆ ಗುರುತಿಸಲಾಗಿದೆ. ರಾಜ್ಯದಲ್ಲಿ ಎಸ್‍ಐಆರ್ ಇದೇ ಜೂ.20 ರಿಂದ ಆರಂಭಗೊಳ್ಳಲಿದೆ. ಈ ಹಂತದಲ್ಲಿ ಜನ ಸಾಮಾನ್ಯರಿಂದ ಎಸ್‍ಎಸ್‍ಎಲ್‍ಸಿ ಅಂಕ ಪಟ್ಟಿ,. ಪಾಸ್ ಪೋರ್ಟ್, ರೇಷನ್ ಕಾರ್ಡ್‍ಗಳನ್ನು ಕೇಳಲಾಗುತ್ತಿದೆ. ಆದರೆ, ಈ ದಾಖಲೆಗಳಿಂದ ವಂಚಿತರಾಗಿರುವ ಆದಿವಾಸಿ ಸಮೂಹ ಮತದಾನದಿಂದ ವಂಚಿತರಾಗುವ ಎಲ್ಲಾ ಅಪಾಯವಿದೆ. ಈ ನೆಲದ ಯಾರೇ ಒಬ್ಬರ ಮತದಾನದ ಹಕ್ಕನ್ನು ತೆಗೆದು ಹಾಕಿದಲ್ಲಿ ಅದರ ಹೊಣೆಗಾರಿಕೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಬೇಕು ಎಂದು ಅಮೀನ್ ಮೊಹಿಸಿನ್ ಆಗ್ರಹಿಸಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ಸಿಪಿಐ(ಎಂಎಲ್)ನ ರಾಜ್ಯ ಪ್ರತಿನಿಧಿ ಡಿ.ಎಸ್.ನಿರ್ವಾಣಪ್ಪ ಅವರು ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಕಾರ್ಯ 9 ರಾಜ್ಯಗಳಲ್ಲಿ ನಡೆದಿದ್ದು, ಸುಮಾರು 6 ಕೋಟಿ ಜನ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಸ್‍ಐಆರ್‍ನಿಂದಾಗಿ 97 ಲಕ್ಷ, ಬಿಹಾರದಲ್ಲಿ 45 ಲಕ್ಷ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದು ಬಿಜೆಪಿ ಪರವಾಗಿ ಮತಹಾಕದ ಮಂದಿಯನ್ನು ಮತದಾನದಿಂದಲೇ ಹೊರಗಿಡುವ ಷಡ್ಯಂತ್ರವೆಂದು ಆರೋಪಿಸಿದರು. ಒಕ್ಕೂಟದ ಪ್ರಮುಖರು ಹಾಗೂ ನಿವೃತ್ತ ಪ್ರಾಂಶುಪಾಲ ಜೆ.ಸೋಮಣ್ಣ ಅವರು ಮಾತನಾಡಿ ದೇಶದೊಳಗೆ ನುಸುಳಿರುವ ವಿದೇಶಿ ನುಸುಳುಕೋರರ ಪತ್ತೆಗಾಗಿ ಎಸ್‍ಐಆರ್ ಎನ್ನಲಾಗುತ್ತಿದೆ. ಅಂದರೆ, ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಅಧಿಕಾರ ನಡೆಸಿರುವ ಬಿಜೆಪಿ ತನ್ನ ಈ ಅವಧಿಯಲ್ಲಿ, ನುಸುಳುಕೋರರನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ನ್ಯಾಯಾಲಯವು ಎಸ್‍ಐಆರ್‍ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಕ್ರಮಗಳಿಗೆ ಸಮ್ಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಎಎಐಆರ್ ನಡೆಯುವ ಸಂದರ್ಭ ಅದು ಸೂಚಿಸಿರುವ ಹನ್ನೊಂದು ದಾಖಲಾತಿಗಳಲ್ಲಿ ಜನಸಾಮಾನ್ಯರ, ಆದಿವಾಸಿಗಳ, ಬಡವರ್ಗದ ಕೈಯಲ್ಲಿ ಒಂದಾದರು ದಾಖಲೆ ಇರುವಂತೆ ನೋಡಿಕೊಳ್ಳುವ ಹಾಗೂ ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದರು. ಸಂವಿಧಾನ ಸಂರಕ್ಷಣಾ ಪಡೆಯ ಪ್ರಮುಖ ಸುರೇಶ್ ಅವರು ಮಾತನಾಡಿ, ಜೂ.20 ರಂದು ಬೆಂಗಳೂರು ತಲುಪುವಂತೆ ಬೀದರ್, ವಿಜಯಪುರ, ಉತ್ತರ ಕನ್ನಡ, ತುಮಕೂರು ಮತ್ತು ಉಡುಪಿ ಜಿಲ್ಲೆಯಿಂದ ಜಾಗೃತಿ ಅಭಿಯಾನ ಆರಂಭಗೊಂಡಿದೆ. ಉಡುಪಿಯಿಂದ ಆರಂಭಗೊಂಡ ಅಭಿಯಾನ ದಕ್ಷಿಣ ಕನ್ನಡವನ್ನು ಹಾದು ಇಂದು ಕೊಡಗಿದೆ ಆಗಮಿಸಿದೆ. ಮುಂದೆ ಈ ಅಭಿಯಾನ ಮೈಸೂರು, ಚಾಮರಾಜನಗರ, ಮಂಡ್ಯ ಮೂಲಕ ಬೆಂಗಳೂರಿಗೆ ತೆರಳಲಿದೆ ಎಂದು ತಿಳಿಸಿದರು. ಜಾಗೃತಿ ಅಭಿಯಾನದಲ್ಲಿ ಪ್ರಗತಿಪರ ಒಕ್ಕೂಟದ ಖಲೀಲ್ ಬಾಷ, ಎಂ.ಕೆ.ಮನ್ಸೂರ್ ಆಲಿ, ಮೇರಿ ವೇಗಸ್, ಅಲ್ಲಾರಂಡ ವಿಠಲ್ ನಂಜಪ್ಪ, ಹೇಮಂತ್, ಹೆಚ್.ಜೆ.ಪ್ರಕಾಶ್, ವೈ.ಎಂ.ಸುರೇಶ್ ಮೊದಲಾದವರಿದ್ದರು.









