
ಮಡಿಕೇರಿ ಜೂ.15 NEWS DESK : ಈಜುಕೊಳಕ್ಕೆ ಇಳಿದ ಸಂದರ್ಭ ಉಸಿರಾಟ ಸಮಸ್ಯೆಯಿಂದ ಪ್ರವಾಸಿಗ ಮೃತಪಟ್ಟ ಘಟನೆ ವಿರಾಜಪೇಟೆ ಹೊರ ವಲಯದ ಪ್ರತಿಷ್ಟಿತ ರೆಸಾಟ್೯ನಲ್ಲಿ ನಡೆದಿದೆ. ಗೋವಾದ ಪಣಜಿಯಿಂದ ವಿರಾಜಪೇಟೆ ಸಮೀಪದ ರೆಸಾರ್ಟ್ ಗೆ ಆಗಮಿಸಿದ್ದ ಮನೋಜ್ ಆನಂದ್(57) ಎಂಬವರೇ ಮೃತ ದುರ್ದೈವಿ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರೆಸಾಟ್೯ ಆಗಮಿಸಿದ್ದರು. 2.30ರ ಸಮಯದಲ್ಲಿ ಮನೋಜ್ ಆನಂದ್ ಈಜುಕೊಳ ಕ್ಕೆ ಇಳಿದಿದ್ದ ಸಂದರ್ಭ ಉಸಿರಾಟದ ತೊಂದರೆ ಉಂಟಾಗಿದ್ದು, ನೀರಿನಲ್ಲಿ ಮುಳುಗಿದ್ದರು ಎನ್ನಲಾಗಿದೆ. ಬಳಿಕ ರೆಸಾಟ್೯ ಸಿಬ್ಬಂದಿಗಳು ಅವರನ್ನು ನೀರಿನಿಂದ ಹೊರ ತೆಗೆದು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ಪರೀಕ್ಷಿಸಿದ ವೈದ್ಯರು ಮನೋಜ್ ಆನಂದ್ ಮೃತಪಟ್ಟಿರುವುದಾಗಿ ದೃಡಪಡಿಸಿದ್ದಾರೆ. ಘಟನೆಯ ಮಾಹಿತಿ ಅರಿತು ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ನೀರಿಗೆ ಇಳಿದ ಸಂದರ್ಭ ಹೃದಯಾಘಾತ ಆಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಪ್ರವಾಸಿಯ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.









