
ಮಡಿಕೇರಿ NEWS DESK ಜೂ.17 : ಅಕ್ರಮವಾಗಿ “ನಕ್ಷತ್ರ ಆಮೆ”ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡುವಿನ ಮಡಿಕೈ ಎಂಬಲ್ಲಿನ ನಿವಾಸಿ ಶ್ರೀಧರನ್ ಸಿ.ಕೆ.(70) ಹಾಗೂ ಕಾಸರಗೋಡು ನಿವಾಸಿ ವಿಷ್ಣು ಆಚಾರ್ಯ(68) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೋಮವಾರಪೇಟೆಗೆ ತೆರಳುವ ರಸ್ತೆಯ ಕನ್ನಂಡ ಪಡುಬೀರ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಇಬ್ಬರು ವ್ಯಕ್ತಿಗಳು ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ನಕ್ಷತ್ರ ಆಮೆಯೊಂದನ್ನು ವಶಕ್ಕೆ ಪಡೆದಿದ್ದಾರೆ. ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕರಾದ ಸಂಗೀತಾ ಜಿ., ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಶಿವಶಂಕರ್, ಸಿಬ್ಬಂದಿಗಳಾದ ಉಮೇಶ್ ಎನ್.ಕೆ., ಶನಂತ ಕೆ.ಪಿ., ದಿವ್ಯಶ್ರೀ ಹೆಚ್.ಎಸ್ ಹಾಗೂ ಸ್ವಾಮಿ ಎಂ. ಪಾಲ್ಗೊಂಡಿದ್ದರು.








