
ಮಡಿಕೇರಿ NEWS DESK ಜೂ 18 : ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲದ ಯೋಗವು , ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮತೋಲನಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಇಂಥ ಯೋಗ ವಿದ್ಯೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು . ನಗರದ ರೆಡ್ ಬಿಕ್ಸ್ ನ ಸತ್ಕಾರ ಸಭಾಂಗಣದಲ್ಲಿ ನಡೆದ ಯೋಗ ಭಾರತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯೋಗಾಭ್ಯಾಸದಿಂದ ಒಬ್ಬ ವ್ಯಕ್ತಿ ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾನೆ, ನಿರಂತರ ಯೋಗ ಪ್ರಕ್ರಿಯೆಯಿಂದ ವ್ಯಕ್ತಿಯಲ್ಲಿ ತಾಳ್ಮೆ ಸಹನೆ ಸಹಾನುಭೂತಿ, ಪ್ರೀತಿ ವಾತ್ಸಲ್ಯ ಸಹಜವಾಗಿಯೇ ಮೈಗೂಡಿಕೊಳ್ಳುವುದರಿಂದ ಸಮಾಜದ ಆರೋಗ್ಯವೂ ಬಲಗೊಳ್ಳುತ್ತದೆ ಎಂದು ಅವರು ವಿಶ್ಲೇಷಿಸಿದರು. ಭಾರತೀಯ ಪ್ರಾಚೀನ ಶಿಕ್ಷಣದಲ್ಲಿ ಒಂದಾದ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳು ಒಂದು ಹಂತದಲ್ಲಿ ಮಡಿವಂತಿಕೆಯಿಂದ ಕೂಡಿದ್ದು ಇತ್ತೀಚಿನ ವರ್ಷಗಳಲ್ಲಿ ಇಡೀ ವಿಶ್ವವೇ ಅದನ್ನು ಸ್ವೀಕರಿಸಿ ಜೂನ್ 21 ಅನ್ನು ವಿಶ್ವ ಯೋಗ ದಿನ ಎಂದು ಘೋಷಿಸಿರುವುದರ ಹಿಂದೆ ಭಾರತದ ಪ್ರಾಚೀನ ಪದ್ಧತಿ ಮತ್ತು ಪರಂಪರೆಗಳ ಭವ್ಯತೆಯನ್ನು ಕಾಣಬಹುದು ಎಂದೂ ಚಿದ್ವಿಲಾಸ್ ಹೇಳಿದರು. ಬದಲಾದ ಜೀವನ ಶೈಲಿಯಲ್ಲಿ ಯುವ ಪೀಳಿಗೆಗೆ ಯೋಗ,ಧ್ಯಾನ ಮತ್ತು ಪ್ರಾಣಯಾಮದಂತಹ ನಿತ್ಯ ಅಭ್ಯಾಸ ಅತ್ಯಂತ ಅವಶ್ಯಕ ಎಂದು ಚಿದ್ವಿಲಾಸ್ ಸಲಹೆ ನೀಡಿದರು. ಮಡಿಕೇರಿಯಲ್ಲಿ 25 ವರ್ಷಗಳನ್ನು ಪೂರೈಸಿರುವ ಯೋಗ ಭಾರತಿ ತನ್ನ ಇದುವರೆಗಿನ ಇತಿಹಾಸವನ್ನು ದಾಖಲಿಸುವ ಪ್ರಯತ್ನ ಮಾಡಲಿ ಎಂದು ಅವರು ಆಶಿಸಿದರು. ಭಾರತೀಯ ವಿದ್ಯಾ ಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಮಾತನಾಡಿ,ಭಾರತದ ಯೋಗ ವಿದ್ಯೆಯನ್ನು ವಿದೇಶಿಯರು ಕಲಿತು ಇಂದು ಅವರುಗಳೇ ಯೋಗ ಶಿಕ್ಷಕರಾಗಿ ಸಹಸ್ರಾರು ಮಂದಿಗೆ ಯೋಗವನ್ನು ಭೋಧಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಯೋಗ ಭಾರತಿ ಸಂಸ್ಥೆಯ ಪೋಷಕರಾದ ಡಾಕ್ಟರ್ ಎಂ. ಜಿ. ಪಾಟ್ಕರ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ನಿರಂತರ ಯೋಗ ಅಭ್ಯಾಸ ಮಾಡುವಂತೆ ಕರೆ ನೀಡಿದರು. ಮಾನವ,ಪ್ರಕೃತಿಯ ಅಂಶವಾಗಿದ್ದು ಪ್ರಕೃತಿ ಮತ್ತು ಪರಮಾತ್ಮನ ಜೋಡಣೆಗೆ ಯೋಗಾಭ್ಯಾಸ ಅತ್ಯಂತ ಸಹಕಾರಿ ಎಂದು ಅವರು ಹೇಳಿದರು. ಭಾರತದ ಕೊಡುಗೆಯಾದ ಯೋಗ ವಿದ್ಯೆ, ಮನುಷ್ಯನ ಶಾರೀರಿಕ ಮತ್ತು ಆಂತರಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಶೈಲಜಾ , ಜೂನ್ 21 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಬೆಳಿಗ್ಗೆ ಆರು ಗಂಟೆಗೆ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮಗಳಿದ್ದು ಆಸಕ್ತರು ಪಾಲ್ಗೊಳ್ಳುವಂತೆ ಕರೆ ನೀಡಿದರು. ಯೋಗದಿಂದ ಉತ್ತಮ ಆರೋಗ್ಯ ಪಡೆಯುವ ಬಗ್ಗೆ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ ಅರುಣ್ ಮಾಹಿತಿ ನೀಡಿದರು. ಮಡಿಕೇರಿಯಲ್ಲಿ ಯೋಗಭಾರತಿ ಸಂಸ್ತೆಯನ್ನು ಸ್ಫಾಪಿಸಿ 25 ವಷ೯ಗಳ ಕಾಲ ನಿರಂತರ ಯೋಗಶಿಕ್ಷಣ ನೀಡುತ್ತಾ ಬಂದಿರುವ ಯೋಗ ಭಾರತಿ ಸಂಸ್ಥೆಯ ಪ್ರಾಚಾರ್ಯ ಕೆ.ಕೆ. ಮಹೇಶ್ ಕುಮಾರ್ ಅವರು, ಸಂಸ್ಥೆ 25 ವರ್ಷಗಳನ್ನು ಸವೆಸಿದ ಕುರಿತು ಮಾಹಿತಿ ನೀಡಿದರು. ಯೋಗ ಭಾರತಿ ಸಂಸ್ಥೆಯ ಶಿಬಿರಾರ್ಥಿ , ಜಿ ಆರ್ ರವಿಶಂಕರ್ ಸ್ವಾಗತಿಸಿ, ಜ್ಯೋತಿ ವರದಿವಾಚಿಸಿ, ಸವಿತಾ ವಂದಿಸಿದರು. ವೇದಿಕೆಯಲ್ಲಿ ಜಯಲಕ್ಷ್ಮಿ ಪಾಟ್ಕರ್ ಉಪಸ್ಥಿತರಿದ್ದರು. ಸಂಸ್ಥೆಯ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನದ ಮೂಲಕ ಸಭಿಕರ ಮೆಚ್ಚುಗೆ ಪಡೆದರು.









