
ಮಡಿಕೇರಿ NEWS DESK ಜೂ.18 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ “ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು” ವಿಷಯದ ಕುರಿತು ಜೂ.26ರಂದು ವಿಚಾರಗೋಷ್ಠಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಬೆಳಿಗ್ಗೆ 10.30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ವಿಕ್ರಮ್ ಹೆಗಡೆ ಅವರು “ಕೊಡವ ಧಾರ್ಮಿಕ ಆಚರಣೆ, ‘ಕೋವಿ-ತೋಕ್” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ” ಕುರಿತು ವಿಷಯ ಮಂಡಿಸಲಿದ್ದಾರೆ. ಸುಪ್ರೀo ಕೋರ್ಟ್ ಹಾಗೂ ನ್ಯೂಯಾರ್ಕ್ನ ವಕೀಲರಾದ ಹಿಮಾ ಲಾರೆನ್ಸ್ ವಿಕ್ರಮ್ ಹೆಗಡೆ ಅವರು “ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ ಮತ್ತು ಅದಿಮ ಸಂಜಾತ ಕೊಡವ ಜನಾಂಗೀಯ ಗುರುತು” ವಿಷಯದ ಕುರಿತು ಮಾತನಾಡಲಿದ್ದಾರೆ. ಈ ವಿಚಾರಗೋಷ್ಠಿಯು ಕೊಡವರ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ದೀರ್ಘಕಾಲದ ಆಕಾಂಕ್ಷೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಪ್ರಸ್ತುತ ಸಂದರ್ಭದಲ್ಲಿ ಸಾಂವಿಧಾನಿಕ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಎನ್.ಯು.ನಾಚಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೊಡವರ “ಕೋವಿ”ಗೆ 1949 ರಲ್ಲಿ ಸರ್ದಾರ್ ಪಟೇಲರು ನೀಡಿದ ಸಂಸದೀಯ ಮನ್ನಣೆ. ಶಾಸ್ತ್ರೀಯ “ಕೊಡವ” ಗುರುತನ್ನು ಮರುಸ್ಥಾಪಿಸಿದ 2021 ಡಿ.8 ರ ಕರ್ನಾಟಕ ಹೈಕೋರ್ಟ್ನ ತೀರ್ಪು, ಶಸ್ತ್ರಾಸ್ತ್ರ ಕಾಯ್ದೆ 2029 ರ ಅವಧಿ ಮುಗಿದ ನಂತರವೂ “ಕೋವಿ-ತೋಕ್” ಗೆ ಶಾಶ್ವತ ವಿನಾಯಿತಿ ನೀಡುವುದು, ಪರಕೀಯ ರಾಜರು ಮತ್ತು ಬ್ರಿಟಿಷರು ವಶಪಡಿಸಿಕೊಂಡ ವಂಶಪಾರoಪರ್ಯ ಜಮ್ಮಾಬಾಣೆ ಭೂಮಿಯ ಮರುಸ್ಥಾಪನೆ. ಅಂತರಾಷ್ಟ್ರೀಯ ಕಾನೂನಿನಡಿ ಕಂದಾಯ ರೈತರು ಮತ್ತು ಆದಿಮ ಸಂಜಾತ ಜನಾಂಗೀಯ ರೈತರ ನಡುವಿನ ವ್ಯತ್ಯಾಸ ಗುರುತಿಸಿಸುವಿಕೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಅಮೂರ್ತ ಕ್ಷೇತ್ರದ ಮಾದರಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು, ಮುಂಬರುವ 2027 ರ ಭಾರತದ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವ ಜನಾಂಗಕ್ಕೆ ಪ್ರತ್ಯೇಕ “ಕೋಡ್” ಮತ್ತು “ಕಾಲಂ” ನೀಡುವುದು ಸೇರಿದಂತೆ ಸಿಎನ್‌ಸಿಯ ಕಳೆದ 36 ವರ್ಷಗಳ ಸುದೀರ್ಘ ಶಾಂತಿಯುತ ಹೋರಾಟದ ಮೂಲಕ ಪ್ರತಿಪಾದಿಸಿದ ವಿವಿಧ ಬೇಡಿಕೆಗಳ ಕುರಿತು ವಿಚಾರಗೋಷ್ಠಿಯಲ್ಲಿ ಉಲ್ಲೇಖಿಸಲಾಗುವುದು. ಕೊಡವ ಸಮುದಾಯದ ಸಾಂವಿಧಾನಿಕ ಭವಿಷ್ಯದ ಕುರಿತಾದ ಈ ವೈಚಾರಿಕ ವಿಚಾರಗೋಷ್ಠಿಯಲ್ಲಿ ಸರ್ವ ಕೊಡವರ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.








