
ಮಡಿಕೇರಿ ಜೂ.18 NEWS DESK : ರಾಷ್ಟ್ರೀಯ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ (ಎನ್‍ಎಂಎಂಎಸ್) ಪರೀಕ್ಷೆಯಲ್ಲಿ ಕೊಡ್ಲಿಪೇಟೆಯ ಜಿ.ಹಂಸ ಉತ್ತೀರ್ಣಳಾಗಿ ಸಾಧನೆ ತೋರುವ ಮೂಲಕ ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾಳೆ. ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯಾದ ಜಿ.ಹಂಸಳನ್ನು ಶಾಲೆಯ ಮುಖ್ಯೋಪದ್ಯಾಯರು ಹಾಗೂ ಶಿಕ್ಷಕರು ಸ್ಮರಣಿಕೆ ನೀಡಿ, ಗೌರವಿಸಿದರು. ಈ ಸಂದರ್ಭ ಮಾತನಾಡಿದ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಅಡ್ಮನಿ ಅವರು, 8ನೇ ತರಗತಿ ವಿದ್ಯಾರ್ಥಿಗಳು ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿ.ಹಂಸ ಕೊಡ್ಲಿಪೇಟೆಯ ನೀರುಗುಂದ ಗ್ರಾಮದ ಎನ್.ವಿ.ಗಿರೀಶ್ ಹಾಗೂ ಪುಷ್ಪಾವತಿ ದಂಪತಿಯ ಪುತ್ರಿ.









