

ಮಡಿಕೇರಿ NEWS DESK ಜೂ.19 : ಶ್ರೀ ಪಾಡಿ ಇಗ್ಗುತ್ತಪ್ಪ ಕ್ಷೇತ್ರದ ಮಲ್ಮ ಕುಂದ್ (ಬೆಟ್ಟ)ನ ರಕ್ಷಣೆಗೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಬದ್ಧವಾಗಿದೆ. ಅಲ್ಲದೆ ಜನ ಬೆಂಬಲದೊoದಿಗೆ ಯಾವುದೇ ಹೋರಾಟಕ್ಕೂ ಸಿದ್ಧವಾಗಿದೆ ಎಂದು ಟ್ರಸ್ಟ್ ನ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಮಲ್ಮ ಕುಂದ್ ನಲ್ಲಿ ನಡೆಯುತ್ತಿರುವ ಕಾಮಗಾರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು ಶ್ರೀ ಪಾಡಿ ಇಗ್ಗುತ್ತಪ್ಪ ಕ್ಷೇತ್ರಕ್ಕೆ ಧಕ್ಕೆ ಬಂದರೆ ಇಡೀ ಕೊಡವ ಹಾಗೂ ಕೊಡವ ಭಾಷಿಕ ಜನಾಂಗಕ್ಕೆ ಧಕ್ಕೆ ಬಂದ ಹಾಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊರ ಜಿಲ್ಲೆಯಿಂದ ಆಗಮಿಸಿ ಭೂಮಿಯನ್ನು ಖರೀದಿಸಿ ಶ್ರೀಪಾಡಿ ಕ್ಷೇತ್ರದ ಮಲ್ಮ ಕುಂದ್ (ಬೆಟ್ಟ) ನಲ್ಲಿ ಜಾಗವನ್ನು ಸಮತಟ್ಟು ಮಾಡಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಸಾರ್ವಜನಿಕವಾಗಿ ಈ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗ್ತಿದ್ದು, ಶ್ರೀ ಪಾಡಿಗ್ಗುತ್ತಪ್ಪ ದೇವಸ್ಥಾನ ಸಮಿತಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತೆಗೆದುಕೊಳ್ಳುವ ನಿರ್ಣಯಕ್ಕೆ ಮತ್ತು ಹೋರಾಟದ ನಿರ್ಧಾರಕ್ಕೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ಜೂ.20 ರಂದು ನಡೆಯುವ ವಿಶೇಷ ಗ್ರಾಮ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೂ ಟ್ರಸ್ಟ್ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊಡಗು ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ, ಈ ಬಗ್ಗೆ ಅರಿವಿದ್ದರೂ ಇಲ್ಲಿನ ಪರಿಸರದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಪರಿಸರ ರಕ್ಷಣೆಯ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಭೂ ಪರಿವರ್ತನೆ ಮಾಡಿ ದೊಡ್ಡ ದೊಡ್ಡ ರೆಸಾರ್ಟ್ ಗಳನ್ನು ಮತ್ತು ಲೇಔಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಪರಿಸರಕ್ಕೆ ಹಾಗೂ ಸ್ಥಳೀಯ ಮೂಲ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಕೊಡಗು ಮಾರಕ ಯೋಜನೆಗಳ ವಿರೋಧಿ ಹೋರಾಟ ವೇದಿಕೆಯ ಮೂಲಕ ನಿರಂತರ ಹೋರಾಟವನ್ನು ನಡೆಸುತ್ತಾ ಬರಲಾಗುತ್ತಿದೆ. ಆದರೆ ಯಾವುದೇ ಭಯವಿಲ್ಲದೆ ಬೆಟ್ಟಗುಡ್ಡಗಳಿಗೆ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಹಾನಿ ಮಾಡಲಾಗುತ್ತಿದೆ. ಪ್ರಸ್ತುತ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಲ್ಮ ಬೆಟ್ಟದ ಒಡಲಿನಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಯಿಂದ ಮುಂದೊoದು ದಿನ ಈ ಭಾಗದಲ್ಲಿ ಭೂಕುಸಿತವಾಗುವ ಸಾಧ್ಯತೆಗಳಿದೆ. ಅಲ್ಲದೆ ಪರಿಸರ ಅಸಮತೋಲನ ಉಂಟಾಗಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಜಿಲ್ಲಾಡಳಿತ, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಸರಕಾರ ತಕ್ಷಣ ಎಚ್ಚೆತ್ತುಕೊಂಡು ಸ್ಥಳೀಯ ಜನರ ಭಾವನೆಗೆ ಗೌರವ ನೀಡಿ ಕಾಮಗಾರಿಗೆ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕೊಡಗಿನಲ್ಲಿ ಭೂ ಪರಿವರ್ತನೆಗೆ ಸಾಕಷ್ಟು ನಿಬಂಧನೆ ಮತ್ತು ನಿರ್ಬಂಧಗಳಿವೆ. ಆದರೂ ಆಡಳಿತ ವ್ಯವಸ್ಥೆ ನಿರಂತರ ಭೂ ಪರಿವರ್ತನೆಗೆ ಯಾವ ಕಾನೂನಿನಡಿ ಅವಕಾಶ ನೀಡುತ್ತಿದೆ ಎನ್ನುವುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಒಂದು ವೇಳೆ ಅಧಿಕಾರಿಗಳು ಕಾನೂನನ್ನು ಉಲ್ಲಂಘಿಸಿ ಭೂ ಪರಿವರ್ತನೆ ಮಾಡಿದ್ದರೆ ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತಿನಲ್ಲಿಟ್ಟು ಅವರ ವಿರುದ್ಧ ತನಿಖೆ ನಡೆಸಬೇಕು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಡೆದಿರುವ ಭೂ ಪರಿವರ್ತನೆ ಕುರಿತು ವಿಶೇಷ ತನಿಖಾ ತಂಡದ ಮೂಲಕ ಪರಿಶೀಲಿಸಿ ವರದಿಯನ್ನು ಸರಕಾರ ಸಿದ್ಧಪಡಿಸಬೇಕು. ಆ ಮೂಲಕ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೇಡಿಕೆಗಳನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜೀವ್ ಬೋಪಯ್ಯ, ಉಪಾಧ್ಯಕ್ಷ ಆಚಾಂಡಿರ ಕುಶಾಲಪ್ಪ, ಕಾರ್ಯದರ್ಶಿ ಅಣ್ಣಿರ ಹರೀಶ್ ಮಾದಪ್ಪ, ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ, ಮಲ್ಲಮಾಡ ಪ್ರಭು ಪೊಣ್ಣಚ್ಚ, ಮಚ್ಚಮಾಡ ಅನಿಶ್ ಮಾದಪ್ಪ, ಮಾಳೇಟಿರ ಶ್ರೀನಿವಾಸ್, ಪುಚ್ಚಿಮಂಡ ಬಬ್ಲು, ನೆರವಂಡ ಅನೂಪ್, ಚೋಕಂಡ ಸೂರಜ್, ಚೆದಂಡ ಶಮ್ಮಿ ಮಾದಯ್ಯ, ಪಾಡೆಯಂಡ ದೀಪಕ್, ಅಪ್ಪಂಡೇರoಡ ಯಶವಂತ್, ಅಂಚೆಟ್ಟಿರ ಮನು, ತಂಬುಕುತ್ತಿರ ಮಧು, ಹಾಗೂ ಉಳುವಂಗಡ ಲೋಹಿತ್ ಭೀಮಯ್ಯ ಎಚ್ಚರಿಕೆ ನೀಡಿದ್ದಾರೆ.








