
ಮಡಿಕೇರಿ NEWS DESK ಜೂ.22 : ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುವ ಮುಟ್ಲು ಗ್ರಾಮದಲ್ಲಿ ಈ ಬಾರಿ ಜೂನ್ ಕೊನೆಯ ವಾರವಾದರೂ ಮಳೆ ಬೀಳದೆ ಕೃಷಿಕರು ಕಂಗಾಲಾಗಿದ್ದಾರೆ. ಮಳೆಯ ಅಭಾವದಿಂದ ಭತ್ತದ ಕೃಷಿ ವಿಳಂಬವಾಗಿದ್ದು ಸಸಿಗಳು ಒಣಗುತ್ತಿವೆ. ಉಳುಮೆ ಮಾಡಿದ ಗದ್ದೆಗಳಿಗೆ ನೀರಿಲ್ಲದೆ ಒಣಗಿ ಹೋಗಿವೆ. ಈ ಭಾಗದಲ್ಲಿ ಜೂನ್ ತಿಂಗಳಿನಲ್ಲಿ ಭತ್ತದ ನಾಟಿ ಆರಂಭ ಆಗಬೇಕಾಗಿತ್ತು, ಆದರೆ ಮಳೆಯಾಗದೆ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಸ್ಥಳೀಯ ಕೃಷಿಕ ಉದಿಯಂಡ ಎಸ್.ಕಾರ್ಯಪ್ಪ ಅವರು ಪುತ್ತರಿ ಹಬ್ಬದಲ್ಲಿ ಕದಿರು ತೆಗೆಯಲಾದರೂ ಇರಲಿ ಎಂದು ಬಕೆಟ್ ನಲ್ಲಿ ನೀರು ಹಾಕಿ ಒಣ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದಾರೆ. ಜಿಲ್ಲೆಯ ಕೃಷಿಕ ವರ್ಗ ಮಳೆಯನ್ನೇ ಎದುರು ನೋಡುತ್ತಿದ್ದಾರೆ.









