
ಸುಂಟಿಕೊಪ್ಪ NEWS DESK ಜೂ.22 : ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯವಾಗಿದೆ. ಈ ಕಾರಣದಿಂದ ಸರಕಾರ ಆಂಗ್ಲ ಭಾಷಾ ತರಗತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ತಿಳಿಸಿದ್ದಾರೆ. ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಗರಿಷ್ಠವಾಗಿ ಬೆಳೆಯಲು ಶಿಕ್ಷಕರ ಪಾತ್ರ ಮಹತ್ವದಾಗಿರುತ್ತದೆ ಎಂದರು. ಶಾಲೆಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.5 ಲಕ್ಷ ಶಾಸಕರ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು.
ಗದ್ದೆಹಳ್ಳ ಸರಕಾರಿ ಶಾಲೆಗೆ ಸೇರಿದ ಮೈದಾನವನ್ನು ಟರ್ಫ್ ಮೈದಾನವನ್ನಾಗಿ ಪರಿವರ್ತನೆ ಮಾಡಬೇಕೆಂಬ ಆಮ್ನೆಸ್ಟಿ ಪುಟ್ಬಾಲ್ ಕ್ಲಬ್ ನ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ 2 ಶಾಲೆಗಳ ಶಾಲಾಭಿವೃದ್ಧಿ ಸಮಿತಿಯಲ್ಲಿ ನಿರ್ಧಾರವಾಗಿ ಸರಕಾರದ ಅನುಮತಿ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಸಂಜೆಯ ವೇಳೆ ಮಾತ್ರ ಕ್ಲಬ್ ಮತ್ತು ಸಾರ್ವಜನಿಕರಿಗೆ ಮೈದಾನ ಒದಗಿಸಲಾಗುವುದು. ಯಾವುದೇ ಅನ್ಯ ಚಟುವಟಿಕೆಗಳಿಗೆ ಮೈದಾನವನ್ನು ದುರ್ಬಳಕೆ ಮಾಡಬಾರದು. ಸಮಿತಿಗಳ ಸಭೆಯ ನಂತರ ಈ ಕುರಿತು ಚಿಂತನೆ ಮಾಡೋಣ ಎಂದು ಡಾ.ಮಂತರ್ ಗೌಡ ಹೇಳಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅವರು ಮಾತನಾಡಿ 3 ವರ್ಷಗಳ ಕನಸು ನನಸಸಾಗಿದೆ, ಶಾಲೆಯ ಬೆಳವಣಿಗೆಯಲ್ಲಿ ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಶಾಲೆಗೆ ಅತ್ಯವಶ್ಯಕವಾಗಿ ತಡೆಗೋಡೆ ಮತ್ತು ಶೌಚಾಲಯ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಮತ್ತೊಬ್ಬ ಮಾಜಿ ಅಧ್ಯಕ್ಷ ಕೆ.ಇ.ಕರೀಂ ಅವರು ಮಾತನಾಡಿ ಶಾಲೆ ಮುಂದಿನ ವರ್ಷ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಅದ್ದೂರಿ ಸಮಾರಂಭಕ್ಕೆ ಗ್ರಾಮಸ್ಥರು ಕೈ ಜೋಡಿಸಬೇಕೆಂದು ಕರೆ ನೀಡಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್, ಯಂಕನ ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಪ್ರಮುಖರಾದ ಹೆಚ್.ಯು ರಫೀಕ್ ಖಾನ್ ಹಾಗೂ ಪಿ.ಆರ್.ಸುಕುಮಾರ್ ಮಾತನಾಡಿದರು. ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸಕೀನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ.ಪಂ ಮಾಜಿ ಅಧ್ಯಕ್ಷೆ ಶಿವಮ್ಮ ಮಹೇಶ್, ಮಾಜಿ ಸದಸ್ಯೆ ಗೀತಾ, ಯಂಕನ ಶ್ರೀರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ, ಎಲ್‌ಕೆಜಿ ಎಸ್‌ಡಿಎಂಸಿ ಅಧ್ಯಕ್ಷ ರಶೀದ್, ಸ್ಯಾಂಡಲ್‌ವುಡ್ ತೋಟದ ವ್ಯವಸ್ಥಾಪಕ ನಿಸಾರ್, ಬಾಳೆಕಾಡು ತೋಟದ ವ್ಯವಸ್ಥಾಪಕ ಪ್ರಸನ್ನ, ಇಬ್ರಾಹಿಂ, ಮುಖ್ಯೋಪಾದ್ಯಾಯರಾದ ವೈ.ಸಿ.ಕುಮಾರ್, ಹೇಮಾವತಿ, ಪ್ರಮುಖರಾದ ಪಟ್ಟೆಮನೆ ಚರಣ್, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ನಡೆದ ನೃತ್ಯ ಕಾರ್ಯಕ್ರಮ ನೆರೆದಿದ್ದವರ ಗಮನ ಸೆಳೆಯಿತು.









