
ವಿರಾಜಪೇಟೆ ಜೂ.22 NEWS DESK : ವಿರಾಜಪೇಟೆಯ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ಕಾವೇರಿ ಯೋಗ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ 12ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾವೇರಿ ಯೋಗ ಕೇಂದ್ರದ ಯೋಗ ತರಬೇತುದಾರರಾದ ಸೀತಾರಾಂ ರೈ ಅವರು ವಿದ್ಯಾರ್ಥಿಗಳಿಗೆ ಯೋಗದಿನಾಚರಣೆಯ ಮಹತ್ವದ ಕುರಿತು ವಿವರಿಸಿದರು. ಯೋಗ ಅಭ್ಯಾಸವೂ ವ್ಯಕ್ತಿಗಳ ಮಾನಸಿಕ ಹಾಗೂ ದೈಹಿಕವಾಗಿ ಸದೃಢನಾಗಿ ಮಾಡುತ್ತದೆ. ದಿನದ 45 ನಿಮಿಷಗಳ ಕಾಲ ಪ್ರತಿಯೊಬ್ಬರು ಯೋಗವನ್ನು ಮಾಡಬೇಕು ಎಂದರು. “ಯೋಗವು ಕೇವಲ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಒಂದು ಜೀವನ ವಿಧಾನವಾಗಿದೆ. ಯೋಗಾಭ್ಯಾಸದಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ತಾಡಾಸನ ದೇಹದ ಭಂಗಿಯನ್ನು ಸರಿಪಡಿಸಿ ಸಮತೋಲನವನ್ನು ಹೆಚ್ಚಿಸುತ್ತದೆ, ವೃಕ್ಷಾಸನ ಏಕಾಗ್ರತೆ ಮತ್ತು ದೇಹದ ಸಮತೋಲನವನ್ನು ಸುಧಾರಿಸುತ್ತದೆ, ತ್ರಿಕೋನಾಸನ ಸೊಂಟ, ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ, ಭುಜಂಗಾಸನ ಬೆನ್ನುಮೂಳೆಯ ನಮ್ಯತೆಯನ್ನು ಹೆಚ್ಚಿಸಿ ಎದೆ ಭಾಗವನ್ನು ವಿಸ್ತರಿಸುತ್ತದೆ, ವಜ್ರಾಸನ ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ಊಟದ ನಂತರವೂ ಮಾಡಬಹುದಾದ ಆಸನವಾಗಿದೆ ಎಂದು ಹೇಳಿದರು. ಪದ್ಮಾಸನ ಧ್ಯಾನಕ್ಕೆ ಸೂಕ್ತವಾದ ಆಸನವಾಗಿದ್ದು, ಮನಸ್ಸಿಗೆ ಶಾಂತಿ ನೀಡುತ್ತದೆ. ಪಶ್ಚಿಮೋತ್ತಾನಾಸನ ಬೆನ್ನು ಮತ್ತು ಕಾಲುಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ, ಧನುರಾಸನ ದೇಹದ ನಮ್ಯತೆಯನ್ನು ಹೆಚ್ಚಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ, ಪವನಮುಕ್ತಾಸನ ಹೊಟ್ಟೆಯ ಅನಿಲ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಶವಾಸನ ಸಂಪೂರ್ಣ ವಿಶ್ರಾಂತಿ ನೀಡಿ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ವಿವಿಧ ಯೋಗಾಭ್ಯಾಸ ಮಾಡಿಸಿ, ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಎಂ. ಕೆ.ಪದ್ಮ ಯೋಗ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯ ಪ್ರಾಂಶುಪಾಲರಾದ ಶ್ರೀಮತಿ ಎಂ. ಕೆ.ಪದ್ಮ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಜಿ ವೀಣಾ, ಉಪನ್ಯಾಸಕ ವೃಂದವರು, ರಾಷ್ಟ್ರೀಯ ಸೇವಾ ಯೋಜನ ಘಟಕದ ಕಾರ್ಯಕ್ರಮಾಧಿಕಾರಿ ಶ್ರೀಮತಿ ಅನುಪಮ ತಿಮ್ಮಯ್ಯ, ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಿಗೆ ಕಾವೇರಿ ಯೋಗ ತಂಡದ ಸದ್ಯಸರುಗಳಾದ ರವಿ ಕಲಾ ರೈ, ಲಲಿತಾ, ರತಿ ಕಲಾ, ಶೀಲಾ, ಲಿಲ್ಲಿ, ಸೌಜಿತ್, ರಾಗಿಣಿ, ಶಾಂತಲ ಚಂದ್ರ ಯೋಗಾಸನಗಳನ್ನು ಮಾಡಿದರು. ಕನ್ನಡ ಉಪನ್ಯಾಸಕಿ ಎಂ.ಪಿ.ದಮಯಂತಿ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕಿ ಡೈನಸೋಮಯ್ಯ ವಂದಿಸಿದರು.









