
ವಿರಾಜಪೇಟೆ ಸೆ.8 NEWS DESK : ವಿರಾಜಪೇಟೆಯ ಐತಿಹಾಸಿಕ ಕ್ರೈಸ್ತ ದೇವಾಲಯವಾದ ಸಂತ ಅನ್ನಮ್ಮ ಚರ್ಚ್‌ನಲ್ಲಿ ಮೇರಿಮಾತೆ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಸಂಭ್ರಮವಾಗಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಕಳೆದ ಒಂಬತ್ತು ದಿನಗಳಿಂದ ಚರ್ಚ್‌ನಲ್ಲಿ ವಿಶೇಷ ನವೆನ ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ದಿನವಾದ ಮಂಗಳವಾರ ಚರ್ಚ್‌ನಲ್ಲಿ ಬೆಳಗ್ಗಿನಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂತ ಅನ್ನಮ್ಮ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ರೆವರೆಂಡ್ ಫಾದರ್ ಜೇಮ್ಸ್ ಡೊಮಿನಿಕ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಪ್ರಧಾನ ಧರ್ಮಗುರುಗಳು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಹಬ್ಬದ ಪ್ರಯುಕ್ತ ಪ್ರಬೋಧನೆ, ಬೈಬಲ್ ಪಠಣ ಹಾಗೂ ಗಾಯನ ವೃಂದದವರಿಂದ ದೇವರ ನಾಮಸ್ತುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಧರ್ಮಗುರುಗಳು ಆಶೀರ್ವಚನದ ಮೂಲಕ ಹಬ್ಬದ ಸಂದೇಶ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಂತ ಅನ್ನಮ್ಮ ಚರ್ಚ್‌ನ ಒಳ ಆವರಣದಲ್ಲಿರುವ ಮಾತೆ ಮೇರಿಯವರ ಪ್ರತಿಮೆಗೆ ನೆರೆದಿದ್ದ ಭಕ್ತಾದಿಗಳು ಪುಷ್ಪಾರ್ಚನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಭಕ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ತದನಂತರ ಆಗಮಿಸಿದ್ದ ಸರ್ವ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಚರ್ಚ್‌ನ ಸಹಾಯಕ ಧರ್ಮಗುರು ಫಾ. ವಿಲ್ಫ್ರೆಡ್, ಚರ್ಚ್ ಪಾಲನಾ ಸಮಿತಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.










