ಸುಂಟಿಕೊಪ್ಪ, NEWS DESK ಅ.31: ಕುಶಾಲನಗರ ತಾಲ್ಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ಸಂಜೆ ಪಥಸಂಚಲನ ನಡೆಯಿತು.
ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಆರ್.ಕೆ. ಬಡಾವಣೆಯಲ್ಲಿ ಸಂಘದ ಭಗವಾಧ್ವಜಕ್ಕೆ ಪುಷ್ಪನಮನ ಸಲ್ಲಿಸಿ, ಪ್ರಾರ್ಥನೆಯೊಂದಿಗೆ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು.
ಘೋಷ್ ವಾದ್ಯದೊಂದಿಗೆ ಶಿಸ್ತುಬದ್ಧವಾಗಿ ಸಮವಸ್ತ್ರ ಧರಿಸಿ ಸಾಗಿದ ಸ್ವಯಂಸೇವಕರ ಪಥಸಂಚಲನವು ಗದ್ದೆಹಳ್ಳ ಮಾರ್ಗವಾಗಿ ಪಟ್ಟಣ ಪ್ರವೇಶಿಸಿ ಅಯ್ಯಪ್ಪ ದೇವಾಲಯದವರೆಗೆ ಸಾಗಿತು. ಅಲ್ಲಿಂದ ಹಿಂದಿರುಗಿ ಮಾರುಕಟ್ಟೆ ಮಾರ್ಗವಾಗಿ ತೆರಳಿ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯದ ಬಳಿ ಸಂಪನ್ನಗೊಂಡಿತು.
ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಮಹಿಳೆಯರು ಹಾಗೂ ಮಕ್ಕಳು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಯಂಸೇವಕರನ್ನು ಸ್ವಾಗತಿಸಿದರು.
ಕುಶಾಲನಗರ ತಾಲ್ಲೂಕಿಗೆ ಸೇರಿದ ಸುಂಟಿಕೊಪ್ಪ, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಕುಶಾಲನಗರ, ನಾಕೂರು ಕಾನ್ ಬೈಲ್, ಕಂಬಿಬಾಣೆ, ಚೆಟ್ಟಳ್ಳಿ, ಕೆದಕಲ್, ಮತ್ತಿಕಾಡು ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಆರ್ಎಸ್ಎಸ್ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ್ದ ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

















