
ಮಡಿಕೇರಿ ಸೆ.10 NEWS DESK : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಜಿಲ್ಲೆಯ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಹಕಾರದ ಬಗ್ಗೆ ಜನಜಾಗೃತಿ ಉಂಟುಮಾಡುವಲ್ಲಿ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಪಾತ್ರ’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಜನಜೀವನದ ಸಮಗ್ರ ಅಭಿವೃದ್ಧಿಗೆ ಸಹಕಾರಿ ವ್ಯವಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ’ ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆ ನಡೆಯಿತು. ಮೊದಲಿಗೆ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಿದರು. ತದನಂತರ ಪಿಯು ಕಾಲೇಜು ವಿದ್ಯಾರ್ಥಿಗಳು ವಿಷಯದ ಕುರಿತು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಪಿ.ಯು. ರಾಬಿನ್ ದೇವಯ್ಯ, “ಸಹಕಾರ ಕ್ಷೇತ್ರವು ಅತ್ಯಂತ ವಿಶಾಲವಾಗಿದ್ದು, ಜನಜೀವನದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಸಹಕಾರ ಸಂಘಗಳಿಂದ ದೊರೆಯುವ ವಿವಿಧ ಸಾಲಗಳು ಜನರ ಜೀವನಮಟ್ಟ ಹೆಚ್ಚಿಸಲು ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ಪಡೆಯಲು ನೆರವಾಗುತ್ತಿವೆ” ಎಂದರು. ”ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವುದಷ್ಟೇ ಅಲ್ಲದೆ, ಚಿಂತನಾ ಶಕ್ತಿ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದಾಗಿದೆ. ಇಂದಿನ ವೇದಿಕೆಯು ಸಭಾಕಂಪನವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಕೇವಲ ಸ್ಪರ್ಧಿಗಳಲ್ಲ, ನಾಳೆಯ ನಾಯಕರಾಗಿ ಸಮಾಜವನ್ನು ರೂಪಿಸುವ ಶಕ್ತಿ ಹೊಂದಿದ್ದಾರೆ. ಶಿಕ್ಷಣದ ನಂತರ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಹಕಾರ ಕ್ಷೇತ್ರಕ್ಕೂ ಪ್ರಾಧಾನ್ಯತೆ ನೀಡಬೇಕು,” ಎಂದು ಹಾರೈಸಿ, ಸ್ಪರ್ಧೆಗೆ ಪ್ರೋತ್ಸಾಹಿಸಿದ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೋಷಕರಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರಾದ ಶ್ರೀ ಎಂ.ಟಿ. ಸುಬ್ಬಯ್ಯ, ಪಿ.ಎನ್. ಚಂದ್ರಪ್ರಕಾಶ್, ಎಸ್.ಆರ್. ಸುನಿಲ್ ರಾವ್, ತೀರ್ಪುಗಾರರಾದ ಎಂ.ಎಂ. ಶ್ಯಾಮಲ, ಕೆ.ಐ.ಸಿ.ಎಂ. ಪ್ರಾಂಶುಪಾಲರಾದ ಪುಟ್ಟಸ್ವಾಮಿ, ಉಪನ್ಯಾಸಕರಾದ ಶ್ರೀ ಮಹದೇವಪ್ಪ, ಸಂಜೀವ್, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಹಾಗೂ ಬಿ.ಸಿ. ಅರುಣ್ ಕುಮಾರ್ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸ್ಪರ್ಧೆಯ ಫಲಿತಾಂಶಗಳು: ಪ್ರಬಂಧ ಸ್ಪರ್ಧೆ (ಪ್ರೌಢಶಾಲೆ): ಪ್ರಥಮ: ಶಪ್ನ ಸಿ.ಎನ್. (ಇಕ್ರಾ ಪಬ್ಲಿಕ್ ಸ್ಕೂಲ್, ಸಿದ್ದಾಪುರ), ದ್ವಿತೀಯ: ಇಂಪ ಕೆ.ಕೆ. (ಜ್ಞಾನಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು), ತೃತೀಯ: ಯಶಸ್ವಿ ಎಸ್.ವಿ. (ಕೆ.ಪಿ.ಎಸ್. ಪ್ರೌಢಶಾಲೆ, ಶಿರಂಗಾಲ), ಸಮಾಧಾನಕರ ಬಹುಮಾನ: ಪ್ರೇಕ್ಷ ಪೊನ್ನಮ್ಮ ಕೆ.ಆರ್. (ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ, ಚೇರಂಬಾಣೆ) :: ಚರ್ಚಾ ಸ್ಪರ್ಧೆ (ಪದವಿ ಪೂರ್ವ):: ಪ್ರಥಮ: ಭೂಮಿಕಾ ಸಿ.ಎಚ್. (ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜು, ಸೋಮವಾರಪೇಟೆ), ದ್ವಿತೀಯ: ಭುವನ ಪೂವಯ್ಯ (ಲಯನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು, ಕಳತ್ಮಾಡು)
ತೃತೀಯ: ತ್ರಿಷಾ ಎ.ಎಸ್. (ಸಿ.ಐ. ಪದವಿಪೂರ್ವ ಕಾಲೇಜು, ಪೊನ್ನಂಪೇಟೆ), ಸಮಾಧಾನಕರ ಬಹುಮಾನ: ಅಶ್ವಿತ ಎ.ಸಿ. (ಸಂತ ಜೋಸೆಫರ ಪದವಿಪೂರ್ವ ಕಾಲೇಜು, ಮಡಿಕೇರಿ)










