ವಿರಾಜಪೇಟೆ, NEWS DESK ಸೆ.10: ಶ್ರೇಷ್ಠ ಶಿಕ್ಷಣತಜ್ಞ ಹಾಗೂ ತತ್ವಜ್ಞಾನಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಶಿಕ್ಷಕರ ದಿನಾಚರಣೆಯನ್ನು ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ವತಿಯಿಂದ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಪ್ರತಿಯೊಬ್ಬ ಶಿಕ್ಷಕರ ವ್ಯಕ್ತಿತ್ವ ಹಾಗೂ ವಿಶೇಷ ಗುಣಗಳಿಗೆ ಹೊಂದುವಂತಹ ವಿಶೇಷ ಬಿರುದುಗಳನ್ನು ನೀಡಿ, ಉಡುಗೊರೆಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಆಸೀನರಾಗಲು ಕರೆ ನೀಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು. ಹಾಗೂ ಸಂಯೋಜಕಿ ಅಮೃತ ಅರ್ಜುನ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
10ನೇ ತರಗತಿಯ ವಿದ್ಯಾರ್ಥಿನಿಯರಾದ ಹನಿಯಾ ಎ. ಹಾಗೂ ಆಯಿಷಾ ಅವರು ಸ್ವಾಗತ ಭಾಷಣ ನೆರವೇರಿಸಿದರು. ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಕಿಯರ ನೇತೃತ್ವದಲ್ಲಿ ನಾಲ್ಕು ಗುಂಪುಗಳನ್ನು ರಚಿಸಿ ಥ್ರೋಬಾಲ್, ನಿಧಿ ಬೇಟೆ ಸೇರಿದಂತೆ ಹಲವು ಗುಂಪು ಆಟಗಳು ಹಾಗೂ ವೈಯಕ್ತಿಕ ಮನರಂಜನಾ ಆಟಗಳನ್ನು ಆಯೋಜಿಸಿದರು. ವಿಜೇತ ಶಿಕ್ಷಕರಿಗೆ ಆಯೋಜಕರ ವತಿಯಿಂದ ಬಹುಮಾನ ವಿತರಿಸಲಾಯಿತು.
ಶಿಕ್ಷಕರು ಉತ್ಸಾಹದಿಂದ ವಿವಿಧ ಆಟಗಳಲ್ಲಿ ಭಾಗವಹಿಸಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು 10ನೇ ತರಗತಿಯ ವಿದ್ಯಾರ್ಥಿನಿ ಗಾಯತ್ರಿ ಭಾಷಣ ಮಾಡಿದರು.
ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತು. ಸಾಮೂಹಿಕ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. 10ನೇ ತರಗತಿಯ ಬಾಲಕರ ತಂಡವು ಶಿಕ್ಷಕರ ಹಾವಭಾವ ಹಾಗೂ ಬೋಧನಾ ಶೈಲಿಯನ್ನು ಹೋಲುವಂತೆ ಹಾಸ್ಯಮಯ ನಾಟಕ ಪ್ರದರ್ಶಿಸಿ ಎಲ್ಲರ ಮನಗೆದ್ದಿತು.
ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಲಘು ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು 10ನೇ ತರಗತಿಯ ವಿದ್ಯಾರ್ಥಿನಿಯರಾದ ರ‍್ನಂದ ಕೃತಿಕಾ ಅಕ್ಕಮ್ಮ ಹಾಗೂ ಚೇಂದಿರ ದೀಪ್ಷಿಕಾ ನೆರವೇರಿಸಿದರು.
ವಿದ್ಯಾರ್ಥಿಗಳ ಪ್ರೀತಿ, ಗೌರವ ಹಾಗೂ ಶ್ರಮದಿಂದ ಕಾವೇರಿ ಶಾಲೆಯ ಶಿಕ್ಷಕರ ದಿನಾಚರಣೆ ಅರ್ಥಪೂರ್ಣ, ಸಂತೋಷಭರಿತ ಹಾಗೂ ಸ್ಮರಣೀಯವಾಗಿ ನಡೆಯಿತು.







