ವಿರಾಜಪೇಟೆ, NEWS DESK ಸೆ.20: ಸಮೀಪದ ಮಗ್ಗುಲ ಗ್ರಾಮದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಎಲ್ಎಸ್ಎ ಕೇರ್ಸ್ ವತಿಯಿಂದ ಸಮಾಜಮುಖಿ ಚಟುವಟಿಕೆಯ ಅಂಗವಾಗಿ ನಾಂಗಾಲ ಗ್ರಾಮದ ಕಲ್ತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗಾಡ್ರೆಜ್ ಹಾಗೂ ಟ್ರ್ಯಾಕ್ ಶೂಟ್ಗಳನ್ನು ವಿತರಿಸಲಾಯಿತು.
ಇದರೊಂದಿಗೆ ವಿದ್ಯಾರ್ಥಿಗಳಿಗೆ ಕಲಿಕಾ ಹಾಗೂ ಆಟದ ಸಾಮಗ್ರಿಗಳನ್ನು ಸಹ ವಿತರಿಸಲಾಯಿತು. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರು ಹಾಗೂ ಉದ್ಯಮಿ ಪೂಜಾ ಸಜೇಶ್ ಅವರು ವಿದ್ಯಾರ್ಥಿಗಳಿಗೆ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜಾ ಸಜೇಶ್, “ನಮ್ಮ ಸಂಸ್ಥೆಯ ಎಲ್ಎಸ್ಎ ಕೇರ್ಸ್ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇದೊಂದು ಶೈಕ್ಷಣಿಕ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಬಾರದು. ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮಾನವೀಯತೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಬದುಕಬೇಕು” ಎಂದು ಕರೆ ನೀಡಿದರು.
ಪರಸ್ಪರ ಸಹಕಾರ, ಸೇವಾ ಮನೋಭಾವ ಹಾಗೂ ಸಮಾನತೆಯನ್ನು ಬೆಳೆಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಂಗಾಲ ಗ್ರಾಮದ ಕಲ್ತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫ್ಯಾನ್ಸಿ ಲೋಬೊ, ಸಹ ಶಿಕ್ಷಕಿಯರು, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.








