
ಮಡಿಕೇರಿ, ಸೆ.21 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ವತಿಯಿಂದ ಭಾರತ್ ಕೇರ್ಸ್ ಸಂಸ್ಥೆ, ಸಿಎಸ್‌ಆರ್‌ಬಾಕ್ಸ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಹಾಗೂ ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ (DTE) ಸಹಯೋಗದಲ್ಲಿ ‘ಹನಿವೆಲ್ ಟೆಕ್ನಾಲಜೀಸ್ ಫ್ಯೂಚರ್ ಸ್ಕಿಲ್ಸ್ ಎಡ್ಜ್ ಪ್ರೋಗ್ರಾಂ – ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಸುರಕ್ಷತೆ’ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನು ಸೆ.18ರಂದು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ. ರಾಘವ ಬಿ. ವಹಿಸಿದ್ದರು. ಭಾರತ್ ಕೇರ್ಸ್ ಸಂಸ್ಥೆ, ಸಿಎಸ್‌ಆರ್‌ಬಾಕ್ಸ್‌ನ ಹಿರಿಯ ಸಹಭಾಗಿತ್ವ ಸಹಯೋಗಿ ಶ್ರೀ ಸುಬ್ರಮಣಿ ಪಿ.ವಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕೃತಕ ಬುದ್ಧಿಮತ್ತೆ (AI) ಮತ್ತು ಸೈಬರ್ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಸಹಾಯಕ ಸಾಧನವಾಗಿ ಬೆಳೆಯುತ್ತಿದೆ. ಶಿಕ್ಷಣ, ಸಂಶೋಧನೆ, ಉದ್ಯೋಗ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ AI ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯುವುದರೊಂದಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. AIಯನ್ನು ಮಾನವನಿಗೆ ಪರ್ಯಾಯವಾಗಿ ಮಾತ್ರ ಪರಿಗಣಿಸದೆ, ಮಾನವನ ಜ್ಞಾನ, ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಹಾಯಕ ಸಾಧನವಾಗಿ ಬಳಸಿಕೊಳ್ಳಬೇಕು. ಡಿಜಿಟಲ್ ಸಾಕ್ಷರತೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ, ಸಂವಹನ ಕೌಶಲ್ಯ, ಸೃಜನಶೀಲತೆ ಹಾಗೂ ಸೈಬರ್ ಸುರಕ್ಷತೆಯ ಅರಿವು ಸೇರಿದಂತೆ ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು. :: ಮೂರು ವರ್ಷಗಳ ತಿಳಿವಳಿಕೆ ಒಪ್ಪಂದ :: ಕಾರ್ಯಕ್ರಮದ ಸಂದರ್ಭದಲ್ಲಿ ಭಾರತ್ ಕೇರ್ಸ್ ಸಂಸ್ಥೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಡುವೆ ಮೂರು ವರ್ಷಗಳ ಅವಧಿಗೆ ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಳ್ಳಲಾಯಿತು. ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗೋನ್ಮುಖ ಹಾಗೂ ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿವಿಧ ತರಬೇತಿ ಮತ್ತು ಕಲಿಕಾ ಅವಕಾಶಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. AI, ಸೈಬರ್ ಸುರಕ್ಷತೆ ಹಾಗೂ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅರಿವು ಮತ್ತು ಕೌಶಲ್ಯ ತರಬೇತಿ ನೀಡುವುದರೊಂದಿಗೆ ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹಾಗೂ ವೃತ್ತಿ ಸಿದ್ಧತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಸಂಪನ್ಮೂಲ ವ್ಯಕ್ತಿ ಸುಬ್ರಮಣಿ ಪಿ.ವಿ. ಅವರು AIಯ ಮೂಲಭೂತ ಪರಿಕಲ್ಪನೆಗಳು, ಪ್ರಾಯೋಗಿಕ ಬಳಕೆ, ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ AIಯ ಪಾತ್ರ ಹಾಗೂ ಸೈಬರ್ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. IQAC ಸಂಚಾಲಕಿ ಡಾ. ಸೌಮ್ಯ ಕೆ. ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಶೈಲಶ್ರೀ ಕೆ. ಹಾಗೂ ಅಲೋಕ್ ಬೆಜೈ, ರಾಷ್ಟ್ರೀಯ ಸೇವಾ ಯೋಜನೆ (NSS) ಮತ್ತು ಯುವ ರೆಡ್‌ಕ್ರಾಸ್ (YRC) ಘಟಕಗಳ ಕಾರ್ಯಕ್ರಮಾಧಿಕಾರಿಗಳು, ಡಾ. ರೇಣುಶ್ರೀ ಎಚ್.ಕೆ., ಇಸಿಸಿ ಸಂಚಾಲಕರು ಹಾಗೂ ಇತಿಹಾಸ ವಿಭಾಗದ ಡಾ. ಚಂದ್ರಯ್ಯ ಉಪಸ್ಥಿತರಿದ್ದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಹಿತೈಷಿಣಿ ಪ್ರಾರ್ಥಿಸಿದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ AI, ಸೈಬರ್ ಸುರಕ್ಷತೆ ಹಾಗೂ ಭವಿಷ್ಯದ ಕೌಶಲ್ಯಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ, ಮೂರು ವರ್ಷಗಳ ತಿಳಿವಳಿಕೆ ಒಪ್ಪಂದದ ಸಹಯೋಗದ ಮೂಲಕ ನಿರಂತರ ಕೌಶಲ್ಯಾಭಿವೃದ್ಧಿಗೆ ವೇದಿಕೆ ಕಲ್ಪಿಸಿತು.










