
ಮಡಿಕೇರಿ NEWS DESK ಸೆ.22 : ಸುಂಟಿಕೊಪ್ಪದಲ್ಲಿ ಬಿಳಿ ಫಲಕದ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಿರುವುದರಿಂದ ಹಳದಿ ಫಲಕದ ವಾಣಿಜ್ಯ ವಾಹನಗಳ ಮಾಲೀಕರು ಹಾಗೂ ಚಾಲಕರಿಗೆ ಭಾರೀ ಆರ್ಥಿಕ ನಷ್ಟವಾಗುತ್ತಿದೆ ಎಂದು ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಎಂ.ಐ.ರಿಜ್ವಾನ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಿಯಮಬಾಹಿರವಾಗಿ ಬಿಳಿ ಫಲಕದ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಿರುವ ಕುರಿತು ಈ ಹಿಂದೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅಧಿಕಾರಿಗಳ ಎಚ್ಚರಿಕೆಯ ನಡುವೆಯೂ ಬಿಳಿ ಫಲಕದ ಖಾಸಗಿ ವಾಹನಗಳು ರಾಜಾರೋಷವಾಗಿ ಬಾಡಿಗೆಯಲ್ಲಿ ತೊಡಗಿವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಹಳದಿ ಫಲಕದ ವಾಹನ ಹೊಂದಿರುವ ಮಾಲೀಕರು ಸರಕಾರಕ್ಕೆ ದುಬಾರಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆದರೆ ತೆರಿಗೆ ಪಾವತಿಸದ ಬಿಳಿ ಫಲಕದ ಖಾಸಗಿ ವಾಹನಗಳು ಹಳದಿ ಫಲಕದ ವಾಹನಗಳೊಂದಿಗೆ ಪೈಪೋಟಿಗಿಳಿದು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವ ಮತ್ತು ಸಾರಿಗೆ ನಿಯಮವನ್ನು ಪಾಲಿಸುತ್ತಿರುವ ಮಾಲೀಕರುಗಳಿಗೆ ಹಾಗೂ ಚಾಲಕರುಗಳಿಗೆ ತೊಂದರೆ ನೀಡುತ್ತಿದ್ದಾರೆ. ನಿಯಮ ಉಲ್ಲಂಘಿಸುತ್ತಿರುವ ಚಾಲಕರಿಂದ ಹಳದಿ ಫಲಕದ ವಾಹನಗಳ ಮಾಲೀಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಕಾನೂನು ಕ್ರಮಕ್ಕೆ ಮುಂದಾಗಿದ್ದ ಅಧಿಕಾರಿಗಳ ಮೇಲೆ ಕೆಲವು ರಾಜಕಾರಣಿಗಳ ಮೂಲಕ ಒತ್ತಡ ಹೇರಿರುವ ಪರಿಣಾಮ ಬಿಳಿ ಫಲಕದ ಖಾಸಗಿ ವಾಹನಗಳು ಯಾರ ಭಯವೂ ಇಲ್ಲದೆ ಬಾಡಿಗೆಯಲ್ಲಿ ತೊಡಗಿವೆ. ಬಿಳಿ ಫಲಕದ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಯಾವುದೇ ನಿಬಂಧನೆ ಇಲ್ಲದೆ ಅವಕಾಶ ನೀಡಿರುವುದರಿಮದ ಹಳದಿ ಫಲಕ ಹೊಂದಿರುವ ನಮ್ಮ ವಾಹನಗಳ ಫಲಕವನ್ನು ಕೂಡ ಬಿಳಿ ಮಾಡಿ ಎಂದು ಎಂ.ಐ.ರಿಜ್ವಾನ್ ಒತ್ತಾಯಿಸಿದ್ದಾರೆ. ನಿಯಮ ಉಲ್ಲಂಘಿಸುವ ಬಿಳಿ ಫಲಕದ ವಾಹನಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯ ಎಲ್ಲಾ ಚಾಲಕರ ಸಂಘದ ಸಹಕಾರ ಪಡೆದು ಮಡಿಕೇರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.









