ಮಡಿಕೇರಿ, NEWS DESK ನ.20: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಶಾಲೆಯ ಸಂಸ್ಥಾಪಕ ಸದಸ್ಯೆ ಹಾಗೂ ಕಾರ್ಯಾಧ್ಯಕ್ಷೆ ಕಲಿಯಂಡ ಸರಸ್ವತಿ ಚಂಗಪ್ಪ ಅವರ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಆಯೋಜಿಸಲಾಗುವ 9ನೇ ವರ್ಷದ ‘ಆರ್ಟಿಕ್ಯುಲೇಟ್’ ಚರ್ಚಾ ಸ್ಪರ್ಧೆ ನ.20ರಂದು ನಡೆಯಿತು.
ಕೊಡವ ಸಮಾಜ ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಶಾಲೆಯ ಪ್ರಾಂಶುಪಾಲೆ ಸವಿತಾ ಎಂ.ಜಿ. ಮಾತನಾಡಿ, “ರಾಷ್ಟ್ರದ ಪ್ರಗತಿಗಾಗಿ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ ಇವೆರಡೂ ಜೊತೆಜೊತೆಯಾಗಿ ಸಾಗಬೇಕು ಎಂಬುದು ಇಂದಿನ ಚರ್ಚಾ ಸ್ಪರ್ಧೆಯ ವಿಷಯವಾಗಿದೆ. ಇದು ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಭವಿಷ್ಯದ ನಾಯಕರಾಗಲಿರುವ ವಿದ್ಯಾರ್ಥಿಗಳು ರಾಷ್ಟ್ರದ ಪ್ರಗತಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಆರ್ಥಿಕ ಅಭಿವೃದ್ಧಿಯ ಮಹತ್ವವನ್ನು ಅರಿತುಕೊಳ್ಳಲು ಉತ್ತಮ ವೇದಿಕೆಯಾಗಿದೆ. ಈ ಕುರಿತು ವಿಮರ್ಶಾತ್ಮಕವಾಗಿ ಚಿಂತಿಸಿ, ಅಗತ್ಯ ಬದಲಾವಣೆಗಳನ್ನು ತರಲು ಶ್ರಮಿಸುವುದು ಯುವಪೀಳಿಗೆಯ ಜವಾಬ್ದಾರಿಯಾಗಬೇಕು” ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಕೊಡಗಿನ ಏಳು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ, ವಿಷಯದ ಕುರಿತು ತಮ್ಮ ಅನಿಸಿಕೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದರು.
ವಿಜೇತರು: ಕೊಡಗು ವಿದ್ಯಾಲಯ, ಮಡಿಕೇರಿಯ ಅಕ್ಷರ ಅಪ್ಪಣ್ಣ ಹಾಗೂ ಕೊಕ್ಕಲೆರ ಮಹತ್ವ ಅಪ್ಪಯ್ಯ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಸಫಿನತುಲ್ ಗೌಸಿಯ ಎಂ.ಎಲ್. ಹಾಗೂ ರಿಷಾ ಫಾತಿಮಾ ಪ್ರಥಮ ರನ್ನರ್ ಅಪ್ ಸ್ಥಾನ ಪಡೆದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರನಾಲಿ ಅಯ್ಯಪ್ಪ ಹಾಗೂ ಪಲ್ಲವಿ ಕಾವೇರಮ್ಮ ಎಂ.ಬಿ. ದ್ವಿತೀಯ ರನ್ನರ್ ಅಪ್ ಸ್ಥಾನ ಗಳಿಸಿದರು. ಉತ್ತಮ ವಾಗ್ಮಿ ಪ್ರಶಸ್ತಿಯನ್ನು ಕೊಡಗು ವಿದ್ಯಾಲಯದ ಕೊಕ್ಕಲೆರ ಮಹತ್ವ ಅಪ್ಪಯ್ಯ ಪಡೆದುಕೊಂಡರು.
ಮುಖ್ಯ ತೀರ್ಪುಗಾರರಾಗಿ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಉಪನ್ಯಾಸಕಿ ಡಾ. ಕಂಬೆಯಂಡ ಡೀನಾ ಬೋಜಮ್ಮ ಹಾಗೂ ಮಡಿಕೇರಿಯ ಸೇಂಟ್ ಮೈಕಲ್ಸ್ ಕಾಂಪೋಸಿಟ್ ಕಾಲೇಜಿನ ಉಪನ್ಯಾಸಕಿ ಹೇಮಾ ಕೆ.ಸಿ. ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಆಡಳಿತಾಧ್ಯಕ್ಷೆ ಮುಕ್ಕಾಟಿರ ಪೊನ್ನಮ್ಮ ಪೊನ್ನಪ್ಪ ಹಾಗೂ ಕನ್ನಂಡ ಕವಿತಾ ಕಾವೇರಮ್ಮ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರಾದ ಸುಮಿತ್ರ ಎಂ.ಪಿ., ಸಬಿತಾರಾಣಿ ಎಂ.ಪಿ. ಹಾಗೂ ಸಪ್ನ ಜೆ.ಎಂ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕೃತಿಕ ಬಿ.ಎಚ್. ಸ್ವಾಗತಿಸಿ, ಮನಸ್ವಿ ಬಿ.ಆರ್. ವಂದಿಸಿದರು.
















