
ಮಡಿಕೇರಿ ಸೆ.22 NEWS DESK : ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾgರ ಸಂಘದ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಗುತ್ತಿಗೆದಾರರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದರು. ಮಡಿಕೇರಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗುತ್ತಿಗೆದಾರರು 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿರ್ವಹಿಸಲಾದ ಕಾಮಗಾರಿಗಳ ಬಿಲ್‍ಗಳನ್ನು ತಕ್ಷಣ ಪಾವತಿಸಬೇಕು ಹಾಗೂ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕಾಮಗಾರಿ ನೀಡಬಾರದು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿದರು. ಬಾಕಿ ಇರುವ ಕಾಮಗಾರಿಗಳ ಬಿಲ್ ಮತ್ತಿತರ ಸಮಸ್ಯೆಗಳ ಕುರಿತು ಸೆ.23ರಂದು ಗುತ್ತಿಗೆದಾರ ಪ್ರತಿನಿಧಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಸಭೆ ನಡೆಸಿ, ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಭರವಸೆಗೆ ಗುತ್ತಿಗೆದಾರರ ಸಂಘಗಳು ಸಮ್ಮತಿ ಸೂಚಿಸಿದವು. ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಮಳೆಹಾನಿಗೆ ಸಂಬಂಧಿಸಿದಂತೆ ಸ್ಥಳೀಯ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳಿಗೆ ಸುಮಾರು ರೂ.7.50 ಕೋಟಿ ಬಿಲ್ ಪಾವತಿಗೆ ಬಾಕಿ ಇದೆ. ವರ್ಕ್ ಆರ್ಡರ್ ಆಧಾರದಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಇದೀಗ ಆಡಳಿತಾತ್ಮಕ ಒಪ್ಪಿಗೆ ಇರಲಿಲ್ಲ ಎಂಬ ಕಾರಣ ನೀಡಿ ಬಿಲ್ ಪಾವತಿಸದಿರುವುದು ಸರಿಯಲ್ಲ, ಇದು ಗುತ್ತಿಗೆದಾರರ ತಪ್ಪಲ್ಲ ಎಂದು ಹೇಳಿದರು.
ಕೊಡಗು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ವಹಿಸಿಕೊಡಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಜಿಲ್ಲೆಯ ವಿವಿಧೆಡೆ ವರ್ಕ್ ಆರ್ಡರ್ ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದೆ ಸಂಕಷ್ಟ ಎದುರಾಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗೆ ಆರ್ಥಿಕ ಇಲಾಖೆಯ ಒಪ್ಪಿಗೆ ದೊರೆತಿದ್ದರೆ ಆ ಕಾಮಗಾರಿಗೆ ಹಣದ ವ್ಯವಸ್ಥೆ ಇದೆ ಎಂದರ್ಥ. ಪ್ರಾಕೃತಿಕ ವಿಕೋಪ ಹಾಗೂ ಮುಂಗಾರು ಅವಧಿಯಲ್ಲಿ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಮೂಲಕ ಕೈಗೊಂಡ ಕಾಮಗಾರಿಗಳ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುತ್ತದೆ. ಬಾಕಿ ಇರುವ ಬಿಲ್‍ಗಳನ್ನು ಪರಿಶೀಲಿಸಿ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಬುಧವಾರವೇ ಗುತ್ತಿಗೆದಾರರ ಸಮಸ್ಯೆಗಳ ಕುರಿತು ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾgರ ಸಂಘದ ಅಧ್ಯಕ್ಷ ರಾಜೀವ ಲೋಚನ ಪಿ. ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ರವಿ ಚಂಗಪ್ಪ, ಶಿವಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಲಾರೆನ್ಸ್, ಜಿಲ್ಲಾ ಖಜಾಂಚಿ ಬಾಬು, ತಾಲ್ಲೂಕು ಸಂಘದ ಉಪಾಧ್ಯಕ್ಷ ಬಿ.ಆರ್.ಸದಾಶಿವ ರೈ, ಕಾರ್ಯದರ್ಶಿ ಕೆ.ವಿ.ಕವನ್, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಜಗದೀಶ್ ರೈ, ತಾಲ್ಲೂಕು ಸಂಘದ ನಿರ್ದೇಶಕ ವಿ.ಜಿ. ಮೋಹನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.









