
ಮಡಿಕೇರಿ ಸೆ.22 NEWS DESK : ಯೋಗಾಸನದಲ್ಲಿ ಈಗಾಗಲೆ ವಿವಿಧ ಹದಿನೈದು ದಾಖಲೆಗಳನ್ನು ಮಾಡಿರುವ ಕೊಡಗಿನ ಹೆಮ್ಮೆಯ ಕುವರಿ ಸಿಂಚನಾರಿಂದ ನೂತನ ಮೂರು “ಗೋಲ್ಡನ್ ಬುಕ್ ಆಪ್ ರೆಕಾರ್ಡ್” ಸೇರ್ಪಡೆಯ ಯೋಗ ಪ್ರದರ್ಶನ ಕಾರ್ಯಕ್ರಮ ಸೆ.25ರಂದು ಮದೆ ಗ್ರಾಮದ ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮದೆನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ.ಧನಂಜಯ ಅವರು, ಮದೆನಾಡಿನ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಿಂಚನಾ ಅವರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯ ಸಲುವಾಗಿ ಯೋಗಾಸನಗಳನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು. ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಕಲಾ ಮಂದಿರದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಯಶೋಧರ ಬಿ.ಜೆ. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್.ಪೊನ್ನಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ನ ಏಷ್ಯಾ ಹೆಡ್ ಡಾ.ಮನಿಷ್ ವೈಷ್ಣೋವಿ ಅವರ ಉಪಸ್ಥಿತಿಯಲ್ಲಿ ಸಿಂಚನ ಅವರು ಯೋಗಾಸನಗಳನ್ನು ಪ್ರದರ್ಶಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ, ನಿವೃತ್ತ ಪ್ರಾಂಶುಪಾಲ, ಸಾಹಿತಿ ಬಿ.ಆರ್.ಜೋಯಪ್ಪ, ನಿವೃತ್ತ ಶಿಕ್ಷಕ ಎಂ.ಎಸ್.ಶಿವರಾವ್, ಯೋಗ ಗುರು ಕೆ.ಕೆ.ಮಹೇಶ್ ಕುಮಾರ್, ರೊಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಹೆಚ್.ಟಿ. ಹಾಗೂ ನಾಪೋಕ್ಲು ಬಿಲ್ಲವ ಸಂಘದ ಅಧ್ಯಕ್ಷ ಬಿ.ಪ್ರದೀಪ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಿಂಚನಾರ ತಾಯಿ ಬಿ.ಎಸ್.ರೇಣುಕ ಕೀರ್ತಿಕುಮಾರ್ ಮಾತನಾಡಿ, ಈ ಬಾರಿ ಮಗಳು “ಡಿಂಬಾಸನ”ದಲ್ಲಿ 5ನಿಮಿಷಗಳ ಕಾಲ ಚಲಿಸುವ, ಧನುರಾಸನದಲ್ಲಿ 5 ನಿಮಿಷಗಳ ಕಾಲ ಸುತ್ತುವ ಹಾಗೂ ಡಿಂಬಾಸನ ಮತ್ತು ಸುಪ್ತ ಡಿಂಬಾಸನವನ್ನು ನಿಮಿಷಕ್ಕೆ 10 ಬಾರಿ ಪ್ರದರ್ಶಿಸುವ ಮೂರು ಯೋಗಾಸನಗಳನ್ನು ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗಾಗಿ ಪ್ರದರ್ಶಿಸಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಯೋಗಪಟು ಸಿಂಚನ, ದೇವರಕೊಲ್ಲಿಯ ಶ್ರೀಚಾಮುಂಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಯಶೋಧರ ಬಿ.ಜೆ., ಯೋಗಗುರು ಕೆ.ಕೆ.ಮಹೇಶ್ ಕುಮಾರ್ ಹಾಗೂ ಮದೆಮಹೇಶ್ವರ ಶಾಲೆಯ ನಿವೃತ್ತ ಶಿಕ್ಷಕ ಎಂ.ಎಸ್.ಶಿವರಾವ್ ಉಪಸ್ಥಿತರಿದ್ದರು.










