
ಮಡಿಕೇರಿ NEWS DESK ಸೆ.23 : ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಸೆ.28, 29 ಮತ್ತು 30ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅಗತ್ಯ ಸೇವೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ವತಿಯಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಹಕರು ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಹಾಗೂ ಪರ್ಯಾಯ ಡಿಜಿಟಲ್ ಸೇವೆಗಳನ್ನು ಬಳಸಿಕೊಳ್ಳುವಂತೆ ವಿವಿಧ ಬ್ಯಾಂಕ್ ಗಳು ಮನವಿ ಮಾಡಿವೆ. ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ಘೋಷಣೆಯಾಗಿದ್ದು, ದೇಶಾದ್ಯಂತ ಹಣಕಾಸು ವಹಿವಾಟು ಹಾಗೂ ಪ್ರಮುಖ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ನಿಯಮಿತ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂಗಳು, ಬಿಸಿ ಪಾಯಿಂಟ್‌ಗಳು ಸೇರಿದಂತೆ ಇತರ ಡಿಜಿಟಲ್ ಸೇವೆಗಳು ಲಭ್ಯವಿರಲಿವೆ. ಅಲ್ಲದೆ, ಯುಪಿಐ ಮೂಲಕವೂ ವಿವಿಧ ವಹಿವಾಟುಗಳನ್ನು ನಡೆಸಬಹುದಾಗಿದೆ. ಗ್ರಾಹಕರ ಸಹಕಾರ ಹಾಗೂ ನಿರಂತರ ನಂಬಿಕೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಧನ್ಯವಾದಗಳನ್ನು ತಿಳಿಸಿದೆ.









