
ವಿರಾಜಪೇಟೆ ಸೆ.23 NEWS DESK : ಶಾಲಾ ಶಿಕ್ಷಣವನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ, ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಕೃಷಿ ಸಂಸ್ಕೃತಿಯ ಪರಿಚಯಕ್ಕಾಗಿ ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆ ವಿನೂತನ ಹೆಜ್ಜೆಯೊಂದನ್ನು ಇಟ್ಟಿದೆ. ಕೊಡಗಿನಲ್ಲಿ ಪ್ರಥಮ ಬಾರಿಗೆ ಪ್ಲೇಹೋಮ್‌ನಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಕಾಕೋಟುಪರಂಬುವಿನಲ್ಲಿ ನಡೆದ ‘ವೆಟ್‌ಲ್ಯಾಂಡ್ ಸ್ಪೋರ್ಟ್ಸ್’ ಕಾರ್ಯಕ್ರಮಕ್ಕೆ ಕರೆದೊಯ್ದು, ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಶಾಲೆಯ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹದೊಂದಿಗೆ ಆಯೋಜಿಸಲಾದ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಭತ್ತದ ಕೃಷಿ, ನಾಟಿ ವಿಧಾನ ಹಾಗೂ ಕೃಷಿಯ ಮಹತ್ವದ ಕುರಿತು ಪ್ರಾಯೋಗಿಕ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮುಲ್ಲೇರಾ ಮಧು ಮಂಜುನಾಥ್ ಅವರು ಮಕ್ಕಳೊಂದಿಗೆ ಬೆರೆತು, ಭತ್ತದ ನಾಟಿ ಮಾಡುವ ವಿಧಾನ ಸೇರಿದಂತೆ ಕೃಷಿ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ಆಸಕ್ತಿದಾಯಕವಾಗಿ ಹಾಗೂ ವಿವರವಾಗಿ ಮಾಹಿತಿ ನೀಡಿದರು. ಮಣ್ಣಿನಲ್ಲಿ ಕಾಲಿಟ್ಟು, ನೇಗಿಲು-ನಾಟಿ ಸಂಸ್ಕೃತಿಯನ್ನು ಕಣ್ಣಾರೆ ಕಂಡು ಅನುಭವಿಸಿದ ಮಕ್ಕಳು ಕೃಷಿಯ ಮಹತ್ವ ಹಾಗೂ ಅನ್ನದಾತ ರೈತರ ಶ್ರಮದ ಕುರಿತು ನೈಜ ಅರಿವು ಪಡೆದುಕೊಂಡರು. ಪುಟಾಣಿ ಮಕ್ಕಳನ್ನು ಇಂತಹ ಕೃಷಿ ಆಧಾರಿತ ಹೊರಾಂಗಣ ಚಟುವಟಿಕೆಗಳಿಗೆ ಕರೆದೊಯ್ದು ಪ್ರಾಯೋಗಿಕ ಜ್ಞಾನ ನೀಡುತ್ತಿರುವುದು ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎನ್ನಲಾಗಿದ್ದು, ಕಾರ್ಯಕ್ರಮಕ್ಕೆ ಪೋಷಕರು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.










