ಸುಂಟಿಕೊಪ್ಪ, NEWS DESK ಸೆ.24: ವಿಶ್ವ ಹಿಂದೂ ಪರಿಷತ್ ಹಾಗೂ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ 62ನೇ ವರ್ಷದ ಶ್ರೀ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಮೆರವಣಿಗೆಯು ಬುಧವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗಿನಿಂದಲೇ ಗಣಹೋಮ, ಹೂವಿನ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲಿನ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಕೊನೆಯ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನಂತರ ಪ್ರಧಾನ ಅರ್ಚಕರಾದ ಹಾ.ಮಾ. ಗಣೇಶ್ ಶರ್ಮಾ ಹಾಗೂ ಮಂಜುನಾಥ್ ಶರ್ಮಾ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಗೌರಿ ಗಣೇಶನ ಉತ್ಸವ ಮೂರ್ತಿಗೆ ಕೊನೆಯ ಮಹಾ ಆರತಿ ಬೆಳಗಿಸಿ, ಜಯಘೋಷಗಳೊಂದಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ನಾದಸ್ವರ ಹಾಗೂ ಡಿಜೆ ಸಂಗೀತದೊಂದಿಗೆ ಆರಂಭವಾದ ಬೃಹತ್ ಶೋಭಾಯಾತ್ರೆಯಲ್ಲಿ ಯುವಕ-ಯುವತಿಯರು ಸಂಭ್ರಮದಿಂದ ಹೆಜ್ಜೆ ಹಾಕಿದರು. ಸಮಿತಿಯ ಪದಾಧಿಕಾರಿಗಳು 10 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ ಹಾಗೂ ಹವನಗಳನ್ನು ಆಯೋಜಿಸಿ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವವನ್ನು ಆಚರಿಸಿದ್ದರು.
ರಾಮ ಮಂದಿರದಿಂದ ಆರಂಭಗೊಂಡ ಮೆರವಣಿಗೆಯು ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿತು. ಬಳಿಕ ಅದೇ ಮಾರ್ಗವಾಗಿ ಹಿಂತಿರುಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ರಾತ್ರಿ ಗದ್ದೆಹಳ್ಳದ ಯಂಕನ ಉಲ್ಲಾಸ್ ಹಾಗೂ ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಧಿವತ್ತಾಗಿ ಪೂಜೆ ನೆರವೇರಿಸಿ ಗಣೇಶ ಮೂರ್ತಿಯನ್ನು ವಿಸರ್ಜಿಸುವುದರೊಂದಿಗೆ ಸಂಭ್ರಮದ ಗಣೇಶೋತ್ಸವಕ್ಕೆ ತೆರೆ ಬಿದ್ದಿತು.
ಮೆರವಣಿಗೆಯುದ್ದಕ್ಕೂ ಬಣ್ಣಬಣ್ಣದ ಪಟಾಕಿಗಳು ಆಕಾಶದಲ್ಲಿ ಆಕರ್ಷಕ ಚಿತ್ತಾರ ಮೂಡಿಸಿದವು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಸುನ್ನಿ ಶಾಫಿ ಮಸೀದಿ ಬಳಿ ಮೆರವಣಿಗೆ ಆಗಮಿಸಿದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಭಕ್ತರಿಗೆ ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.
ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಸ್. ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ. ಪ್ರಶಾಂತ್, ಸಿ.ಸಿ. ಸುನಿಲ್ ಕುಮಾರ್, ಎಂ. ಗಣೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ನಿಖಿಲ್, ಖಜಾಂಜಿ ಪದ್ಮನಾಭ, ಪದಾಧಿಕಾರಿಗಳಾದ ಎಂ. ಪಾಂಡ್ಯನ್, ಹೆಚ್. ನವೀನ್, ಜಿ. ಹೃತಿಕ್, ಆರ್. ಮಣಿ, ಕೆ.ಎಂ. ಅಜಿತ್, ಆರ್. ಪ್ರಶಾಂತ್, ಎಸ್. ರಾಜೇಶ್, ಬಿ.ಡಿ. ಆಶ್ವಥ್, ಹೆಚ್.ಸಿ. ಯೋಗೇಶ್, ಚೇತನ್, ಆರ್. ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, ದಿನೇಶ್, ಮಿಥುನ್, ಹಿರಿಯರಾದ ಶಾಂತರಾಮ ಕಾಮತ್, ಧನು ಕಾವೇರಪ್ಪ, ಪಿ.ಆರ್. ಸುನಿಲ್ ಕುಮಾರ್, ಪಟ್ಟೆಮನೆ ಉದಯಕುಮಾರ್, ಬಿ.ಎಂ. ಸುರೇಶ್, ಸುರೇಶ್ ಗೋಪಿ, ಎಂ.ಎಸ್. ಸುನಿಲ್, ಮಿಥುನ್, ದಿನು ದೇವಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







