ಮಡಿಕೇರಿ ಸೆ.25 NEWS DESK : ದೇಶದ ಅಖಂಡತೆ, ಏಕತೆ ಹಾಗೂ ಆಂತರಿಕ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಸೆ.28ರಿಂದ ಅ.9ರವರೆಗೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಜನಜಾಗೃತಿ ವಾಹನ ಜಾಥಾ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಸಂಯೋಜಕ ಅಜಿತ್ ಕುಕ್ಕೇರ, ಸೆ.28ರಂದು ಬೆಳಿಗ್ಗೆ 10.30ಕ್ಕೆ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯ ಐದು ತಾಲ್ಲೂಕುಗಳ ಸುಮಾರು 50 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಜಾಥಾ ಸಂಚರಿಸಲಿದ್ದು, ಅ.9ರಂದು ಮಡಿಕೇರಿಯಲ್ಲಿ ಸಮಾರೋಪಗೊಳ್ಳಲಿದೆ ಎಂದರು. ಅಕ್ರಮ ವಲಸಿಗರಿಂದ ಕೊಡಗಿನ ಸಾಮಾಜಿಕ ವ್ಯವಸ್ಥೆ ಹಾಗೂ ದೇಶದ ಭದ್ರತೆಗೆ ಸವಾಲು ಎದುರಾಗುತ್ತಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿ ವಿವಿಧೆಡೆ ನೆಲೆಸಿರುವವರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಪ್ರಮುಖ ಉದ್ದೇಶವಾಗಿದೆ ಎಂದು ಅಜಿತ್ ತಿಳಿಸಿದರು. ಕಾಫಿ ತೋಟಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ಅವರ ಗುರುತು ಹಾಗೂ ದಾಖಲೆಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸುವಂತೆ ತೋಟ ಮಾಲೀಕರು, ಉದ್ಯೋಗದಾತರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗುವುದು ಎಂದರು. ಸಮಿತಿಯ ಪ್ರಮುಖರಾದ ಬಿ.ಬಿ. ಭಾರತೀಶ್ ಮಾತನಾಡಿ, ಕಾರ್ಮಿಕರನ್ನು ನೇಮಿಸಿಕೊಳ್ಳುವ ಮುನ್ನ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಮೂಲಕ ದಾಖಲೆಗಳ ಪರಿಶೀಲನೆ ನಡೆಸಿ, ಅವರ ಮೂಲ ಸ್ಥಳದ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. :: ಜಾಥಾದ ವೇಳಾಪಟ್ಟಿ: ಸೆ.28ರಂದು ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಹುದಿಕೇರಿ, ಪೊನ್ನಂಪೇಟೆ; ಸೆ.29ರಂದು ಕಾನೂರು, ಬಾಳೆಲೆ, ತಿತಿಮತಿ, ಗೋಣಿಕೊಪ್ಪ, ಬಿ.ಶೆಟ್ಟಿಗೇರಿ; ಸೆ.30ರಂದು ವಿರಾಜಪೇಟೆ, ಕಾಕೋಟುಪರಂಬು, ಅಮ್ಮತ್ತಿ ಒಂಟಿಯಂಗಡಿ, ಅಮ್ಮತ್ತಿ ಹಾಗೂ ಮಕ್ಕಂದೂರುಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಅ.6ರಂದು ಕಡಗದಾಳು, ಮರಗೋಡು, ಮೂರ್ನಾಡು, ಹೊದ್ದೂರು; ಅ.7ರಂದು ಪಾರಾಣೆ, ಚೆಯ್ಯಂಡಾಣೆ, ಕಕ್ಕಬ್ಬೆ, ನಾಪೋಕ್ಲು; ಅ.8ರಂದು ಬಲ್ಲಮಾವಟಿ, ಭಾಗಮಂಡಲ, ಚೆಟ್ಟಿಮಾನಿ, ಚೇರಂಬಾಣೆ, ಬೆಟ್ಟಗೇರಿ ಹಾಗೂ ಮದೆನಾಡಿನಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಅ.9ರಂದು ಬೆಳಿಗ್ಗೆ 11ಕ್ಕೆ ಮಡಿಕೇರಿಯಲ್ಲಿ ಸಮಾರೋಪ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಬ್ಬಿರ ಸರಸ್ವತಿ, ಬಾಲಕೃಷ್ಣ ರೈ, ಪುದಿಯೊಕ್ಕಡ ರಮೇಶ್ ಹಾಗೂ ಚಂದ್ರು ಉಡೋತ್ ಉಪಸ್ಥಿತರಿದ್ದರು.










