ನಾಪೋಕ್ಲು, NEWS DESK ಸೆ.26: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೃಷಿ ಇಲಾಖೆಯ ‘ಆತ್ಮ’ ಯೋಜನೆಯಡಿ ನಾಪೋಕ್ಲು ಗ್ರಾಮದ ಮಹಿಳಾ ಸಮಾಜದ ಸದಸ್ಯರಿಗೆ ಆಯೋಜಿಸಲಾಗಿದ್ದ ಅಣಬೆ ಬೇಸಾಯದ ‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಅಣಬೆ ಬೇಸಾಯದ ಪ್ರಾಯೋಗಿಕ ತರಬೇತಿ ಹಾಗೂ ಅಣಬೆ ಕಟಾವು ಪ್ರಕ್ರಿಯೆ ನಡೆಯಿತು. ಅಣಬೆ ಬೀಜಗಳನ್ನು ಬಿಸಿ ನೀರಿನಲ್ಲಿ ಸಂಸ್ಕರಿಸಿ, ಸಿದ್ಧಪಡಿಸಿದ ಹುಲ್ಲಿನೊಂದಿಗೆ ಪಾಲಿಥಿನ್ ಚೀಲಗಳಲ್ಲಿ ತುಂಬಿ 21 ದಿನಗಳ ಕಾಲ ಕತ್ತಲೆ ಕೊಠಡಿಯಲ್ಲಿ ಇರಿಸಲಾಗಿತ್ತು. ಬಳಿಕ 5ರಿಂದ 8 ದಿನಗಳ ಕಾಲ ಬೆಳಕಿನ ವಾತಾವರಣದಲ್ಲಿಟ್ಟು ಪ್ರತಿದಿನ ಎರಡು ಬಾರಿ ನೀರು ಸಿಂಪಡಿಸಿ ಬೆಳೆಸಲಾಗಿದ್ದ ಅಣಬೆಯನ್ನು ಕ್ಷೇತ್ರ ಪಾಠಶಾಲೆಯ ಭಾಗವಾಗಿ ಕಟಾವು ಮಾಡಲಾಯಿತು. ಅಣಬೆ ಕೃಷಿಗೆ ಅಗತ್ಯವಿರುವ ಸಾಮಗ್ರಿಗಳು ಹಾಗೂ ಉಪಕರಣಗಳನ್ನು ‘ಆತ್ಮ’ ಯೋಜನೆಯ ವತಿಯಿಂದ ಉಚಿತವಾಗಿ ಒದಗಿಸಿ, ಮಹಿಳೆಯರಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ನರಿಯಂದಡ ಗ್ರಾಮದ ಪ್ರಗತಿಪರ ಕೃಷಿ ಮಹಿಳೆ ಅಂಬಿಕಾ ಬಿ.ಎ. ಅವರು ಅಣಬೆ ಬೇಸಾಯದ ತಾಂತ್ರಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು. ಮಡಿಕೇರಿ ತಾಲೂಕು ‘ಆತ್ಮ’ ಸಿಬ್ಬಂದಿ ಮೋನಿಕಾ ಕೆ.ಎಸ್. ಹಾಗೂ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಮೋನಿಷಾ ಸಿ.ಎಚ್. ಅವರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಈ ಸಂದರ್ಭದಲ್ಲಿ ಕೃಷಿ ನಿರ್ದೇಶಕ ಸೋಮಶೇಖರ್, ‘ಆತ್ಮ’ ಯೋಜನೆಯ ಯೋಜನಾ ನಿರ್ದೇಶಕಿ ಮೈತ್ರಿ, ನಾಪೋಕ್ಲು ಮಹಿಳಾ ಸಮಾಜದ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ








