
ಸುಂಟಿಕೊಪ್ಪ, NEWS DESK ಸೆ. 28: ಮಾತೃವಾತ್ಸಲ್ಯದಿಂದ ಕಟ್ಟಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ನ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳು ಇಂದು ಪ್ರತಿ ಮನೆಯಲ್ಲಿ ಸ್ವಸಹಾಯದ ಜೊತೆಗೆ ಭೌದ್ಧಿಕ ವಿಕಾಸಕ್ಕೂ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರ ಸರ್ವತೋಮುಖ ಸಬಲೀಕರಣಕ್ಕೆ ಪೂರಕವಾಗಿವೆ ಎಂದು ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ್ ಸುವರ್ಣ ಅಭಿಪ್ರಾಯಪಟ್ಟರು. ಸೋಮವಾರ ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜನಾಥಯ್ಯ–ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 1982ರಲ್ಲಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ರಾಜ್ಯಾದ್ಯಂತ 55 ಲಕ್ಷ ಸದಸ್ಯರನ್ನು ಹೊಂದಿದೆ. ಈ ಹಿಂದೆ ಕೊಡಗಿನ ಕಾರ್ಯಕ್ರಮಗಳನ್ನು ಸುಳ್ಯದ ಕಚೇರಿಯಿಂದ ನಿರ್ವಹಿಸಲಾಗುತ್ತಿತ್ತು. ಇದೀಗ ಕೊಡಗಿಗೆ ಪ್ರತ್ಯೇಕ ಯೋಜನಾ ಕಚೇರಿಯನ್ನು ನೀಡಲಾಗಿದೆ ಎಂದರು. ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಹೆಚ್ಚಿನ ಒತ್ತು ನೀಡಿದ್ದು, ಇದರೊಂದಿಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶಗಳು ಹಾಗೂ ಸರ್ಕಾರಿ ಶಾಲೆಗಳಿಗೆ ಒಂದು ಸಾವಿರ ಶಿಕ್ಷಕರನ್ನು ಒದಗಿಸಲಾಗಿದ್ದು, 77 ಸಾವಿರ ಬೆಂಚು–ಡೆಸ್ಕ್‌ಗಳನ್ನು ನೀಡಲಾಗಿದೆ. ಇದರಿಂದ ಸುಮಾರು ಮೂರೂವರೆ ಲಕ್ಷ ಮಕ್ಕಳ ಭವಿಷ್ಯಕ್ಕೆ ಉತ್ತೇಜನ ದೊರೆತಿದೆ ಎಂದು ತಿಳಿಸಿದರು. ಹೈನುಗಾರಿಕೆಯಲ್ಲಿ 5 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಹಾಯಧನ ನೀಡಲಾಗುತ್ತಿದ್ದು, 100 ಅನಾಥಾಶ್ರಮಗಳಿಗೆ ಸಹಾಯ ಮಾಡಲಾಗುತ್ತಿದೆ. ಒಂದು ಸಾವಿರ ಅನಾಥರಿಗೆ ವಾತ್ಸಲ್ಯ ಮನೆಗಳನ್ನು ನೀಡಲಾಗಿದೆ. ಪ್ರಕೃತಿ ವಿಕೋಪಗಳನ್ನು ಎದುರಿಸಲು 10 ಸಾವಿರ ಮಂದಿಯ ಶೌರ್ಯ ವಿಪತ್ತು ತಂಡವನ್ನು ರಚಿಸಿ ತರಬೇತಿ ನೀಡಲಾಗಿದೆ ಎಂದರು. ಮಹಿಳೆಯರು ಕುಟುಂಬದ ಕಣ್ಣಾಗಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ‘ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕಿ ಸುಮತಿ ಅವರು ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದ ಹಲವು ಉದಾಹರಣೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಿವಿಧ ಮುಖಗಳನ್ನು ವಿವರಿಸಿದರು. ಪೋಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರೊಂದಿಗೆ ನಿರಂತರವಾಗಿ ಸಂಭಾಷಣೆ ನಡೆಸುವ ಮೂಲಕ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳ ಕುರಿತು ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು. ಮಹಿಳಾ ಸಹಾಯವಾಣಿ 181 ಹಾಗೂ ಅಕ್ಕಪಡೆ ತಂಡವು ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಹಾಗೂ ಸಮಾಲೋಚನೆಗೆ ಸದಾ ಸಿದ್ಧವಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಸಂಪರ್ಕಿಸುವಂತೆ ಅವರು ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಕೊಡಗು ಜಿಲ್ಲಾ ಯೋಜನಾ ನಿರ್ದೇಶಕ ವಿಠಲ ಸಾಲ್ಯನ್, ಸಂಪನ್ಮೂಲ ವ್ಯಕ್ತಿ ಶಿಕ್ಷಣ ಇಲಾಖೆಯ ವೀಣಾ ರೈ ಹಾಗೂ ಜನಜಾಗೃತಿ ಸಮಿತಿಯ ಹಿರಿಯ ಸದಸ್ಯ ಡಿ. ನರಸಿಂಹ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ತಜ್ಞೆ ರಾಣಿ ಮಾಚಯ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದ ಶಿವಪ್ಪ ಅವರಿಗೆ ಮಾಸಾಶನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಮದೆನಾಡು ಸ್ವಸಹಾಯ ಸಂಘದಲ್ಲಿ ಶ್ರೀನಿಧಿ ಜ್ಞಾನ ವಿಕಾಸ ಸಮಿತಿಯನ್ನು ಘೋಷಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಕರಕುಶಲ ವಸ್ತುಗಳ ಮಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಆರಂಭದಲ್ಲಿ ರಕ್ಷಾ ಶ್ರೀ ತಂಡದವರು ಪ್ರಾರ್ಥಿಸಿದರು. ಕ್ಷೇತ್ರ ಯೋಜನಾಧಿಕಾರಿ ಪುರುಷೋತ್ತಮ ಸ್ವಾಗತಿಸಿದರು. ಕಾನ್‌ಬೈಲ್ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.








