
ವಿರಾಜಪೇಟೆ ಸೆ.29 NEWS DESK : ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸದಸ್ಯರು ಕೊಡವ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಯನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ಅರಮನೆ ಮೈದಾನದಿಂದ ಬನ್ನಿಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಕೊಡವ ಸಂಸ್ಕೃತಿಯ ಪ್ರತೀಕವಾದ ತಳಿಯತಕ್ಕಿ ಬೊಳ್ಚ ಹಿಡಿದು, ತಾಳ, ದುಡಿ ಹಾಗೂ ಕೊಟ್ಟ್‌ಪಾಟ್‌ನೊಂದಿಗೆ ಕೊಡವ ಸಂಪ್ರದಾಯವನ್ನು ಬಿಂಬಿಸಲಾಯಿತು. ಕೊಡವರ ಸಾಂಪ್ರದಾಯಿಕ ಆಯುಧಗಳಾದ ಒಡಿಕತ್ತಿ ಹಾಗೂ ಬರ್ಜಿ ಹಿಡಿದು, ವಾಲಗದ ನಾದಕ್ಕೆ ಹೆಜ್ಜೆ ಹಾಕಿದ ಸದಸ್ಯರು ಕೊಡಗಿನ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದರು. ಕೊಡವ ಸಂಸ್ಕೃತಿಯ ವಿಶಿಷ್ಟ ಆಚರಣೆಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆ ಹಾಗೂ ವಾಲಗದ ನಾದ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷೆ ಮಾತಂಡ ಕುಶಿ ಉನ್ನತಿ, ಕಾರ್ಯದರ್ಶಿ ಮಾಚಂಗಡ ಸಚಿನ್ ತಿಮ್ಮಯ್ಯ, ಸಹ ಕಾರ್ಯದರ್ಶಿ ಅಳ್ಳಂಡ ಶಹನಾ ಚೋಂದಮ್ಮ, ನಿರ್ದೇಶಕರಾದ ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಪೊನ್ನೋಲತಂಡ ಶರಣು ತಮ್ಮಯ್ಯ, ಕರ್ನಂಡ ಧನುಶ್ರೀ, ಮಾಚಂಗಡ ಭೂಮಿಕಾ, ಸದಸ್ಯರಾದ ಮೂಕೊಂಡ ಸಂಜನಾ ದಮಯಂತಿ, ಮುದ್ದಿಯಡ ಕರಣ್ ಕಾವೇರಪ್ಪ, ನಡಿಕೇರಿಯಂಡ ದಿಯಾ ದೇಚಮ್ಮ, ನಡಿಕೇರಿಯಂಡ ಜೀಯಾ ಬೋಜಮ್ಮ, ಕಾಯಪಂಡ ಸೋನಿಕ ದೇಚಮ್ಮ, ಮೂಕೊಂಡ ಕಾವೇರಮ್ಮ, ಕೊಟ್ಟಂಗಡ ಬಿಪಿನ್ ಬಿದ್ದಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ಹರಿಹರ ವಾಲಗ ತಂಡದ ನವೀನ್, ಕಾರ್ಯಪ್ಪ, ರಮೇಶ್, ಪ್ರವೀಣ್ ಹಾಗೂ ದೇವ್ ವಾಲಗದ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು. ಕೊಡಗಿನ ವಾಲಗ ತಂಡದ ಪ್ರಾಯೋಜಕತ್ವವನ್ನು ಚೇಂದ್ರಿಮಾಡ ಗಣೇಶ್ ನಂಜಪ್ಪ ವಹಿಸಿದ್ದರು.










