
ಮಂಗಳೂರು, NEWS DESK ಸೆ.30 : ಮಂಗಳೂರಿನ ಹೊರವಲಯದ ಕಳವಾರ್ ಸಮೀಪದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಮೂರನೇ ಹಂತದ ಘಟಕದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಸ್ಥಳದಿಂದ ದಟ್ಟ ಕಪ್ಪು ಹೊಗೆ ಆವರಿಸಿಕೊಂಡಿದೆ. ಸ್ಫೋಟದ ಸದ್ದು ಹಲವು ಕಿಲೋಮೀಟರ್ ದೂರದವರೆಗೂ ಕೇಳಿಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಧ್ಯಾಹ್ನ ಸುಮಾರು 12.25ರ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಕಳವಾರ್ ಪ್ರದೇಶದಲ್ಲಿರುವ MRPL ಘಟಕದಲ್ಲಿ ಘಟನೆ ನಡೆದಿದ್ದು, MRPLನ ತುರ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದೆ. ಸ್ಫೋಟದ ಬಳಿಕ ಸ್ಥಳದಿಂದ ಬೆಂಕಿ ಹಾಗೂ ದಟ್ಟ ಕಪ್ಪು ಹೊಗೆ ಏಳುತ್ತಿರುವುದು ಕಂಡುಬಂದಿದೆ. ಸ್ಫೋಟದ ಸದ್ದು ಅಂಗರಗುಂಡಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ, ಕುಳಾಯಿ, ಕಾವೂರು ಸೇರಿದಂತೆ ಮಂಗಳೂರು ನಗರದ ಕೆಲ ಭಾಗಗಳಲ್ಲಿಯೂ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟದ ಪರಿಣಾಮ ಸಮೀಪದ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದ್ದು, ಜೋಕಟ್ಟೆ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಹಲವು ಮನೆಗಳು ನಡುಗಿವೆ ಎಂದು ವರದಿಯಾಗಿದೆ. ಕೆಲವು ಮನೆಗಳ ಬಾಗಿಲು ಹಾಗೂ ಕಿಟಕಿಗಳಿಗೆ ಹಾನಿಯಾಗಿದ್ದು, ಜೋಕಟ್ಟೆ ಗ್ರಾಮ ಪಂಚಾಯಿತಿಯ ಗ್ರಂಥಾಲಯಕ್ಕೂ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ, ಕದ್ರಿ ಹಾಗೂ ಪಾಂಡೇಶ್ವರದಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ MRPL DPS ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಫೋಟಕ್ಕೆ ನಿಖರ ಕಾರಣವೇನು, ಘಟನೆಯಿಂದ ಉಂಟಾಗಿರುವ ಹಾನಿಯ ಪ್ರಮಾಣ ಎಷ್ಟು ಹಾಗೂ ಯಾವುದೇ ಸಾವು-ನೋವು ಸಂಭವಿಸಿದೆಯೇ ಎಂಬ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.








