ಕುಶಾಲನಗರ, NEWS DESK ನ.29: ಕುಶಾಲನಗರ ಪಟ್ಟಣದ ನಂಜುಂಡೇಶ್ವರ ಬಡಾವಣೆಯಲ್ಲಿ ದಾನಿಗಳು ನೀಡಿರುವ ಜಾಗದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವರ ಧಾರ್ಮಿಕ ಉತ್ಸವ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ಭಾನುವಾರ ಆರಂಭಗೊಂಡವು.
ಕುಶಾಲನಗರ ಶ್ರೀ ಬಸವೇಶ್ವರ ದೇವಾಲಯ ಟ್ರಸ್ಟ್ ಹಾಗೂ ವೀರಶೈವ-ಲಿಂಗಾಯತ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಉತ್ಸವದ ಅಂಗವಾಗಿ ಪಟ್ಟಣದ ಆದಿಶಂಕರಾಚಾರ್ಯ ಬಡಾವಣೆ ಬಳಿಯ ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ, ಬಸವೇಶ್ವರ ಸ್ವಾಮಿಯ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಲಾಯಿತು.
ನದಿದಂಡೆಯಲ್ಲಿ ಪುಣ್ಯತೀರ್ಥ ಸಂಗ್ರಹಣೆ ಹಾಗೂ ಅಗ್ರೋದಕ ಪೂಜೆ ನೆರವೇರಿಸಿದ ಬಳಿಕ ಬೆಳ್ಳಿಯ ರಥದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ವಿಗ್ರಹವನ್ನಿರಿಸಿ ಮೆರವಣಿಗೆ ನಡೆಸಲಾಯಿತು. ಋತ್ವಿಜರ ವೇದಘೋಷ, ಮಂಗಳವಾದ್ಯ ಹಾಗೂ ವೀರಗಾಸೆ ತಂಡದ ಪ್ರದರ್ಶನದೊಂದಿಗೆ ಕಳಸ ಹೊತ್ತ ಮಹಿಳೆಯರು ಮತ್ತು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ನಂಜುಂಡೇಶ್ವರ ಬಡಾವಣೆಯ ನೂತನ ದೇವಾಲಯಕ್ಕೆ ತೆರಳಿದರು.
ಕೆ.ಆರ್.ನಗರ ತಾಲ್ಲೂಕಿನ ಹೊಸಕೋಟೆಯ ಎಚ್.ಎಂ. ಯೋಗೇಶ್ ಅವರ ವೀರಗಾಸೆ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಕಾವೇರಿ ನದಿಯಿಂದ ಹೊರಟ ಧಾರ್ಮಿಕ ಉತ್ಸವಕ್ಕೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು.
ದೇವರ ಉತ್ಸವಗಳು ಮನುಷ್ಯನಿಗೆ ಮನಃಶಾಂತಿ ನೀಡುವುದರೊಂದಿಗೆ ಸಮಾಜದಲ್ಲಿ ಎಲ್ಲರೂ ಶಾಂತಿ, ನೆಮ್ಮದಿಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು.
ಮೆರವಣಿಗೆಯಲ್ಲಿ ಜಿಲ್ಲಾ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವಯ್ಯ, ಕೋಶಾಧಿಕಾರಿ ಎಚ್.ಪಿ. ಉದಯ್ ಕುಮಾರ್, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಕರುಣ್, ಬಸವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಂ.ಕೆ. ಧನರಾಜ್, ಸ್ಥಳೀಯ ವೀರಶೈವ ಸಮಾಜದ ಅಧ್ಯಕ್ಷ ಎಸ್. ನಂದೀಶ್, ಪುರಸಭೆಯ ಮಾಜಿ ಅಧ್ಯಕ್ಷ ಎಂ.ಬಿ. ಸುರೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಮುಖಂಡರಾದ ಬಿ.ಬಿ. ಲೋಕೇಶ್, ಎಂ.ಸಿ. ಮಂಜುನಾಥ್, ಮಹಾದೇವ್, ನೇತ್ರಾವತಿ, ಕುಮಾರ್, ಎಸ್.ಎಸ್. ವಿರೂಪಾಕ್ಷಪ್ಪ, ಎಸ್.ಆರ್. ಶಿವಲಿಂಗ, ಧರ್ಮ, ಅಜಿತ್, ಪಿ. ನಟರಾಜು, ಕಮಲ ಉದಯ್, ಗಣೇಶ್, ಸರೋಜ, ಹೇಮಲತಾ ಮತ್ತಿತರರು ಇದ್ದರು.
ನೂತನ ದೇವಾಲಯದಲ್ಲಿ ಧ್ವಜಾರೋಹಣ, ಮಹಾಸಂಕಲ್ಪ, ನಾಂದಿ, ಸಮಾರಾಧನೆ, ಪಂಚಗವ್ಯ ಪ್ರಾಶನ, ವಾಸ್ತುಶಾಂತಿ, ಗಣಹೋಮ, ವಿಗ್ರಹ ಸಂಸ್ಕಾರ, ಧ್ಯಾನಾಧಿವಾಸ ಮತ್ತಿತರ ಪೂಜಾ ವಿಧಾನಗಳೊಂದಿಗೆ ಕಳಶ ಸ್ಥಾಪಿಸಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪಿರಿಯಾಪಟ್ಟಣದ ಪುರೋಹಿತರ ತಂಡ ಹಾಗೂ ಚಂದ್ರಶೇಖರ ಶಾಸ್ತ್ರಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ನ.30ರಂದು ದೇವರ ವಿಗ್ರಹ ಪ್ರತಿಷ್ಠಾಪನೆ
ನ.30ರಂದು ಸೋಮವಾರ ಬೆಳಿಗ್ಗೆ 5ರಿಂದ 6.30ರವರೆಗೆ ಶ್ರೀ ಬಸವೇಶ್ವರ ದೇವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇವಾಲಯದ ಶಿಖರ ಕಳಶ ಸ್ಥಾಪನೆ ನೆರವೇರಲಿದೆ.
ಡಿ.1ರಂದು ಧಾರ್ಮಿಕ ಸಮಾರಂಭ
ಡಿ.1ರಂದು ಬೆಳಿಗ್ಗೆ 10 ಗಂಟೆಗೆ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ನಂಜುಂಡೇಶ್ವರ ಸಭಾಂಗಣದ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭ ನಡೆಯಲಿದೆ. ವಿವಿಧ ಮಠಾಧೀಶರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

















